

ಹನೂರು: ತಲಕಾವೇರಿಯಲ್ಲಿ ಸಂಕ್ರಮಣದಂದು ಕಾವೇರಿ ತೀರ್ಥೋದ್ಭವವಾಗುವಂತೆ ಗೌರಿ ಹಬ್ಬದ ಸಂದರ್ಭದಲ್ಲಿ ಮಹದೇಶ್ವರ ಬೆಟ್ಟದಲ್ಲೂ ಅಚ್ಚರಿ ಎಂಬಂತೆ ಅಂತರಗಂಗೆಯಿಂದ ನೀರು ಹರಿದು ಸಮೀಪದಲ್ಲೇ ಇರುವ ಗೌರಿ ಹೊಂಡವೂ ತುಂಬುತ್ತದೆ.
ಬೇಡಗಂಪಣ ಅರ್ಚಕರು ತಮ್ಮ ಸಂಪ್ರದಾಯದಂತೆ ಗೌರಿ ಹಬ್ಬದ ದಿನ ಹೊಂಡಕ್ಕೆ ಬಾಗಿನ ಅರ್ಪಿಸುತ್ತಾರೆ. ಬಳಿಕ ಹೊಂಡದ ನೀರನ್ನು ಕಸಳಕ್ಕೆ ತುಂಬಿಕೊಳ್ಳುತ್ತಾರೆ. ಕಳಸವನ್ನು ದೇವಸ್ಥಾನಕ್ಕೆ ಕೊಂಡೊಯ್ದು 5 ದಿನ ಇಟ್ಟು ಪ್ರತಿದಿನ ವಿಶೇಷ ಪೂಜೆ ಸಲ್ಲಿಸುತ್ತಾರೆ. ಕೊನೆಯ ದಿನ ಅಂತರಗಂಗೆ ಬಳಿ ಇರುವ ಗೌರಿ ಮಡುವಿಗೆ(ಕೆರೆ) ಕಳಸದ ನೀರನ್ನು ಸಮರ್ಪಿಸುತ್ತಾರೆ.
ಈ ವೇಳೆ ಕಳಸದಲ್ಲಿ ಬಾಗಿನದ ಪದಾರ್ಥಗಳು ಕಂಡುಬಂದರೆ ಅಂತಹ ವಸ್ತುಗಳನ್ನು ಗೌರಮ್ಮ ತೊಟ್ಟಿದ್ದಳು ಎಂದು ಬೇಡಗಂಪಣರು ನಂಬುತ್ತಾರೆ. ಈ ವಿಶೇಷ ಆಚರಣೆಗೆ ಗುರುವಾರ (ಇಂದು) ಚಾಲನೆ ದೊರೆಯಲಿದ್ದು, ಸಂಜೆ 4ಕ್ಕೆ ಗೌರಿ ಹೊಂಡಕ್ಕೆ ಬಾಗಿನ ಅರ್ಪಿಸಿ ಬೇಡಗಂಪಣ ಅರ್ಚಕರು ಕಳಸಕ್ಕೆ ನೀರು ತುಂಬಿಕೊಂಡು ದೇವಸ್ಥಾನಕ್ಕೆ ತರಲಿದ್ದಾರೆ.