

ಕೆ.ಆರ್.ನಗರ: ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯ ಕೊಡಿಸುವ ವಕೀಲರಿಗೆ ಸರ್ಕಾರದದಿಂದ ಯಾವುದೇ ಸಹಾಯ ಮತ್ತು ಅನುಕೂಲ ಇಲ್ಲ ಎಂದು ವಕೀಲರ ಸಂಘದ ಅಧ್ಯಕ್ಷ ರುದ್ರಮೂರ್ತಿ ವಿಷಾದಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಾ.ರಾ.ಸ್ನೇಹ ಬಳಗ ವತಿಯಿಂದ ವಕೀಲರಿಗೆ ಪಡಿತರ ಕಿಟ್ ವಿತರಿಸಿ ಮಾತನಾಡಿದ ಅವರು, ಯಾವುದೇ ಸಂಬಳವಿಲ್ಲದೆ ಕಕ್ಷಿದಾರರು ಕೊಡುವ ಶುಲ್ಕವನ್ನೇ ನಂಬಿ ಕರ್ತವ್ಯ ಮಾಡುವ ವಕೀಲ ಸಮೂಹಕ್ಕೆ ಸರ್ಕಾರ ಯಾವುದೇ ರೀತಿಯ ಪ್ಯಾಕೇಜ್ ಘೋಷಣೆ ಮಾಡದಿರುವುದು ಸರಿಯಲ್ಲ ಎಂದರು.
ಆರ್ಥಿಕವಾಗಿ ವಕೀಲರೂ ಸಂಕಷ್ಟಕ್ಕೊಳಗಾಗಿದ್ದಾರೆ. ಹೀಗಾಗಿ ಅವರಿಗೂ ಪ್ಯಾಕೇಜ್ ಘೋಷಣೆ ಮಾಡಬೇಕು. ಈ ಸಂಬಂಧ ಶಾಸಕರು ಧ್ವನಿ ಎತ್ತಬೇಕು ಎಂದು ಹೇಳಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಲಾಕ್‌ಡೌನ್ ಸಮಯದಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಕಂಕಣಬದ್ಧರಾಗಿ ಶಾಸಕರು ಕೆಲಸ ಮಾಡುತ್ತಿದ್ದು, ಮತದಾರರ ನಂಬಿಕೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತಿದ್ದಾರೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಟಿ.ಕುಮಾರ್, ಸಾ.ರಾ.ಸ್ನೇಹ ಬಳಗ ಅಧ್ಯಕ್ಷ ವಿಜಯಕುಮಾರ್, ಕಾರ್ಯದರ್ಶಿ ಸಿ.ಜೆ.ಆನಂದ್, ನಿರ್ದೇಶಕರಾದ ಮಹೇಶ್, ಮಂಜು, ವಕೀಲರ ಸಂಘದ ಮಾಜಿ ಅಧ್ಯಕ್ಷ ಎಸ್.ಎಸ್.ಗಾಂಧಿ, ಜೆಡಿಎಸ್ ತಾಲೂಕು ವಕ್ತಾರ ಕೆ.ಎಲ್.ರಮೇಶ್ ಮತ್ತಿತರರು ಹಾಜರಿದ್ದರು.