ಉತ್ತಮ ಮತದಾನ ಕಾಂಗ್ರೆಸ್‌ಗೆ ಪೂರಕ

nagaraj gowda
ನಾಗರಾಜ್ ಗೌಡ
Published on

ಶಿಕಾರಿಪುರ: ಗ್ಯಾರಂಟಿ ಯೋಜನೆ ಫಲಾನುಭವಿಗಳು ಮತ ಚಲಾಯಿಸಿದ್ದರಿಂದ ಕಳೆದ ಚುನಾವಣೆಗಿಂತ ಈ ಬಾರಿ ತಾಲೂಕಿನಲ್ಲಿ ಉತ್ತಮ ಮತದಾನವಾಗಿದೆ. ಈ ಕಾರಣದಿಂದ ಕಾಂಗ್ರೆಸ್ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಪಿ.ನಾಗರಾಜ್ ಗೌಡ ಹೇಳಿದರು.

ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಲೋಕಸಭಾ ಚುನಾವಣೆ ನಂತರ ರದ್ದಾಗುತ್ತವೆ ಎಂದು ವಿಪಕ್ಷಗಳ ಅಪಪ್ರಚಾರದ ನಡುವೆಯೂ ಮತದಾರರು ಕಾಂಗ್ರೆಸ್ ಬಗ್ಗೆ ನಂಬಿಕೆ ಉಳಿಸಿಕೊಂಡಿದ್ದಾರೆ. ಏಕೆಂದರೆ ಇಂದಿರಾ ಗಾಂಧಿ ಅವರು ಪ್ರಧಾನ ಮಂತ್ರಿ ಆಗಿದ್ದಾಗ ಜಾರಿಗೆ ತಂದ ವಿಧವಾ ವೇತನ ಸೇರಿ ವಿವಿಧ ಕಾರ್ಯಕ್ರಮಗಳನ್ನು ನಂತರದ ಸರ್ಕಾರಗಳು ಮುಂದುವರಿಸಿವೆ. ರಾಜಕೀಯ ಕಾರಣಕ್ಕಾಗಿ ನಂತರ ಬಂದ ಸರ್ಕಾರ ಯೋಜನೆಗಳ ಹೆಸರನ್ನು ಬದಲಾಯಿಸಿರಬಹುದು. ಆದರೆ ಜನಪ್ರಿಯ ಯೋಜನೆಗಳನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಿಕಾರಿಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಶಿವರಾಂ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರತಿಯೊಬ್ಬ ಕಾರ್ಯಕರ್ತನೂ ಶ್ರಮಿಸಿದ್ದಾನೆ. ಮತದಾರರನ್ನು ಮತಗಟ್ಟೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಚುನಾವಣೆ ಮುಗಿದಿದ್ದು ಸಹೋದರರಂತೆ ಬದುಕಬೇಕಾಗಿದೆ. ವರ್ಷವಿಡೀ ರಾಜಕೀಯ ಮಾತ್ರ ಮಾಡಿಕೊಂಡು ಬದುಕಲು ಸಾಧ್ಯವಿಲ್ಲ ಎಂದರು.
ಶಿರಾಳಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರನಗೌಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಭಂಡಾರಿ ಮಾಲತೇಶ್, ಕಸಬಾ ವಿಎಸ್‌ಎಸ್‌ಎನ್ ಅಧ್ಯಕ್ಷ ಬಡಗಿ ಪಾಲಾಕ್ಷಪ್ಪ, ಎಪಿಎಂಸಿ ನಿರ್ದೇಶಕ ನಗರದ ರವಿಕಿರಣ್, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮಾರವಳ್ಳಿ ಉಮೇಶ್, ತಾಂಡಾ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಶಿವು ನಾಯಕ್, ರೇಣುಕಸ್ವಾಮಿ, ತಿಮ್ಮಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net