ಹಣ ನೀಡುತ್ತಿದ್ದ ATMಗಳಲ್ಲಿ ಇನ್ಮುಂದೆ ಚಿನ್ನದ ನಾಣ್ಯವೂ ಸಿಗುತ್ತೆ!

atm gold coin
Published on

ಹೈದರಾಬಾದ್​: ಎಟಿಎಂ ಯಂತ್ರ ಅಂದಾಕ್ಷಣ ಹಣ ಕೊಡುವ ಮಿಷನ್​ ಅಂತ ನೆನಪಾಗುತ್ತೆ. ಇನ್ಮುಂದೆ ಈ ಯಂತ್ರ ಚಿನ್ನವನ್ನೂ ಕೊಡುತ್ತೆ! ಹೌದು, ಎಟಿಎಂಗಳು ಚಿನ್ನದ ನಾಣ್ಯವನ್ನೂ ವಿತರಣೆ ಮಾಡಲಿವೆ.

ನಗದು ನೀಡುತ್ತಿದ್ದ ಎಟಿಎಂ ಯಂತ್ರಗಳು ಇದೇ ಮೊದಲ ಬಾರಿಗೆ ಚಿನ್ನದ ನಾಣ್ಯವನ್ನೂ ವಿತರಣೆ ಮಾಡಲಿವೆ. ವಿದೇಶಗಳಲ್ಲಿ ಚಿನ್ನದ ಬಿಲ್ಲೆಗಳನ್ನು ನೀಡುವ ಎಟಿಎಂಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಇದೇ ಮಾದರಿಯ ಮೂರು ಎಟಿಎಂ ಯಂತ್ರಗಳು ಹೈದರಾಬಾದ್​ನಲ್ಲಿ ಸ್ಥಾಪಿತ ಆಗಲಿವೆ. ಸಿಕಂದರಬಾದ್​, ಗುಲ್ಜಾರ್​ ಹೌಸ್​, ಮತ್ತು ಅಬಿಡ್ಸ್​ಗಳಲ್ಲಿ ಈ ಎಟಿಎಂಗಳನ್ನು 40 ದಿನಗಳಲ್ಲಿ ಗೋಲ್ಡ್​ಸಿಕ್ಕಾ ಲಿಮಿಟೆಡ್​ ಸ್ಥಾಪಿಸಿಲಿದೆ.

ಪ್ರತಿನಿತ್ಯ ಚಿನ್ನದ ದರದಲ್ಲಿ ಆಗುವ ಏರಿಳಿಕೆಯನ್ನು ಗಮನಿಸಿ ಅದಕ್ಕೆ ತಕ್ಕ ಲೆಕ್ಕಚಾರದಲ್ಲಿ 0.5 ಗ್ರಾಂನಿಂದ 100 ಗ್ರಾಂ ತೂಕದ ಕಾಯಿನ್​ಗಳನ್ನು ಎಟಿಂಎ ವಿತರಿಸಲಿದೆ. ಇವು ಭಾರತೀಯ ಮಾನಕ ಸಂಸ್ಥೆಯಿಂದ (ಬಿಐಎಸ್​) ಮತ್ತು ಹಾಲ್​ಮಾರ್ಕ್​ನಿಂದ ಪ್ರಮಾಣೀಕೃತವಾಗಿರುತ್ತವೆ. ಚಿನ್ನ ಖರೀದಿದಾರರು ಡಿಬಿಟ್​ ಮತ್ತು ಕ್ರೆಡಿಟ್​ ಕಾರ್ಡ್​ಗಳನ್ನು ಬಳಸಿ ಚಿನ್ನದ ಬಿಲ್ಲೆಗಳನ್ನು ಪಡೆಯಬಹುದು. ಇದರ ಜತೆಗೆ ಕಂಪನಿ ಪ್ರಿ ಪೇಯ್ಡ್​ ಮತ್ತು ಪೋಸ್ಟ್​ ಪೇಯ್ಡ್​ ಸ್ಮಾರ್ಟ್​ ಕಾರ್ಡ್​ಗಳನ್ನೂ ಗ್ರಾಹಕರಿಗೆ ವಿತರಿಸಲಿದೆ. ಮಾರುಕಟ್ಟೆ ದರಕ್ಕೆ ಚಿನ್ನದ ಕಾಯಿನ್​ಗಳನ್ನು ಸುಲಭ ರೀತಿಯಲ್ಲಿ ಯಂತ್ರದ ಮುಖೇನ ಪಡೆಯಬಹುದು.

ಇನ್ನೊಂದು ವರ್ಷದಲ್ಲಿ ದೇಶಾದ್ಯಂತ ಮೂರು ಸಾವಿರ ಚಿನ್ನದ ನಾಣ್ಯ ನೀಡುವ ಎಟಿಎಂಗಳನ್ನು ತೆರೆಯುವ ಉದ್ದೇಶ ಇದೆ ಎಂದು ಗೋಲ್ಡ್​ಸಿಕ್ಕಾ ಕಂಪನಿಯ ಸಿಇಒ ಮತ್ತು ಪ್ರವರ್ತಕ ಸೈ ತರುಜ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net