

ಬೆಂಗಳೂರು: ಪಾರ್ಕ್‌ಗೆ ವಾಕಿಂಗ್ ಬರುತ್ತಿದ್ದ 16 ವರ್ಷದ ಬಾಲಕಿಗೆ ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ದೇವಲಾಪುರದ ಲೋಕೇಶ್ ಅಪರಾಧಿ. ಚೆನ್ನಮ್ಮನಕೆರೆ ಶ್ರೀಕಂಠೇಶ್ವರ ಪಾರ್ಕ್ ನಿರ್ವಹಣೆ ಮಾಡಿಕೊಂಡು ಅಲ್ಲಿಯೇ ನೆಲೆಸಿದ್ದ ಲೋಕೇಶ್, ವಾಕಿಂಗ್‌ಗೆ ಬರುತ್ತಿದ್ದ ಬಾಲಕಿಯನ್ನು ಹಿಂಬಾಲಿಸಿ ಪ್ರೀತಿಸುವಂತೆ ಒತ್ತಾಯ ಮಾಡುತ್ತಿದ್ದ. 2022ರ ನ.22ರಂದು ಅಪ್ರಾಪ್ತೆ ಪಾರ್ಕ್‌ನಲ್ಲಿ ಕುಳಿತಿದ್ದಾಗ ಹತ್ತಿರ ಬಂದ ಲೋಕೇಶ್, ತುಂಬಾ ಇಷ್ಟ ಪಡುತ್ತಿದ್ದೇನೆ. ನಿನ್ನ ಮದುವೆಯಾಗಿ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ನಂಬಿಸಿ ಆಕೆಯನ್ನು ದೇವಲಾಪುರಕ್ಕೆ ಕರೆದೊಯ್ದು ತೋಟದ ಮನೆಯಲ್ಲಿ ನೆಲೆಸಿದ್ದ.
ಅಪ್ರಾಪ್ತೆ ಎಂದು ಗೊತ್ತಿದ್ದರೂ ಆಕೆಯ ಜತೆ ಲೈಂಗಿಕ ಕ್ರಿಯೆ ನಡೆಸಿದ್ದ. ಈ ಬಗ್ಗೆ ಬಾಲಕಿ ಪಾಲಕರು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಅಂದಿನ ಇನ್‌ಸ್ಪೆಕ್ಟರ್ ಜಿ. ಉದಯರವಿ ಪ್ರಕರಣ ದಾಖಲು ಮಾಡಿಕೊಂಡು ಲೋಕೇಶ್‌ನನ್ನು ಬಂಧಿಸಿ ಬಾಲಕಿಯನ್ನು ರಕ್ಷಣೆ ಮಾಡಿದ್ದರು. ತನಿಖೆ ನಡೆಸಿದ್ದ ಇನ್‌ಸ್ಪೆಕ್ಟರ್ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ಪಬ್ಲಿಕ್ ಪ್ರಾಸಿಕ್ಯೂಟರ್ ಗೀತಾ ರಾಮಕೃಷ್ಣ ಗೊರವರ ಸಂತ್ರಸ್ತೆ ಪರವಾಗಿ ವಾದ ಮಂಡಿಸಿದ್ದರು. ನ್ಯಾಯಾಧೀಶರಾದ ಇಷ್ರತ್ ಜಹಾನ್ ವಾದ-ಪ್ರತಿವಾದ ಆಲಿಸಿ ಲೋಕೇಶ್ ಅಪರಾಧಿ ಎಂದು ೋಷಣೆ ಮಾಡಿದರು. 20 ವರ್ಷ ಜೈಲು ಶಿಕ್ಷೆ, 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸಂತ್ರಸ್ತ ಬಾಲಕಿಗೆ 3 ಲಕ್ಷ ರೂ. ಪರಿಹಾರವನ್ನು ಸರ್ಕಾರ ಭರಿಸಬೇಕು. ಜತೆಗೆ ದಂಡದ ಮೊತ್ತವನ್ನು ಆಕೆಗೆ ನೀಡುವಂತೆ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.