ಪಿಎಸ್​ಐ ಆಗಿರುವ ತಾಯಿ ವಿರುದ್ಧವೇ ಗದಗ ಎಸ್​ಪಿಗೆ ದೂರು ಕೊಟ್ಟ ಯುವತಿ!

lovers
Published on

ಗದಗ​: ಮಹಿಳಾ ಪೊಲೀಸ್​ ಸಬ್ ​ಇನ್​ಸ್ಪೆಕ್ಟರ್​ ಮಗಳೊಬ್ಬಳು ಪ್ರಿಯಕರನೊಂದಿಗೆ ಮನೆ ಬಿಟ್ಟು ಹೋಗಿ ಮದುವೆ ಮಾಡಿಕೊಂಡ ಪ್ರಕರಣವೀಗ ಎಸ್ಪಿ ಅಂಗಳಕ್ಕೆ ಬಂದಿದೆ. ನಾವಿಬ್ಬರೂ 7 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದೆವು. ನಮ್ಮಿಬ್ಬರ ಮದುವೆಗೆ ಮನೆಯಲ್ಲಿ ಒಪ್ಪಿಗೆ ಇರಲಿಲ್ಲ. ಹಾಗಾಗಿ ನಾವು ಬೇರೆಡೆ ಹೋಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇವೆ. ಪಿಎಸ್​ಐ ಆಗಿರುವ ನನ್ನ ತಾಯಿಯೇ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಅವರು ನಮ್ಮನ್ನು ಬದುಕಲು ಬಿಡಲ್ಲ. ನಮಗೆ ರಕ್ಷಣೆ ಕೊಡಿ ಎಂದು ತಾಯಿ ವಿರುದ್ಧವೇ ಯುವತಿ ಎಸ್​ಪಿಗೆ ದೂರು ಕೊಟ್ಟಿದ್ದಾಳೆ.

ರಾಜೀವ್ ಗಾಂಧಿ ಪೊಲೀಸ್ ಠಾಣೆಯ ಸಬ್​ ಇನ್ಸ್​​ಪೆಕ್ಟರ್​ ರೇಣುಕಾ ಮುಂಡೆವಾಡಗಿ ಮತ್ತು ಅಗ್ನಿಶಾಮಕ ಇಲಾಖೆಯ ಹವಾಲ್ದಾರ್​​ ರಮೇಶ್​ ದಂಪತಿಯ ಏಕೈಕ ಮಗಳು ಮೇಘಾ 6 ತಿಂಗಳ ಹಿಂದೆ ಮನೆಬಿಟ್ಟು ಹೋಗಿ ಕೀರ್ತನಾಥ ಎಂಬಾತನೊಂದಿಗೆ ಸಬ್​ ರಿಜಿಸ್ಟರ್​ ಕಚೇರಿಯಲ್ಲಿ ಮದುವೆಯಾಗಿದ್ದಾಳೆ. ಈ ವಿಚಾರ ತಿಳಿದು ಗರಂ ಆದ ತಾಯಿ ರೇಣುಕಾ ಮತ್ತು ತಂದೆ ರಮೇಶ್ ಇಬ್ಬರೂ ತಮಗೆ ​ಜೀವ ಬೆದರಿಕೆ ಹಾಕಿದ್ದಾರೆ ಎಂದು ಮೇಘಾ ಗದಗ ಎಸ್​ಪಿ ಎನ್.​ಯತೀಶ್​ ಅವರಿಗೆ ದೂರು ನೀಡಿದ್ದಾಳೆ.

ಮೇಘಾ ಮತ್ತು ಕೀರ್ತನಾಥ ಇಬ್ಬರ ಪ್ರೀತಿ ವಿಚಾರ ಮನೆಗೆ ತಿಳಿದಿತ್ತು. ಜಾತಿ ಬೇರೆ ಬೇರೆ ಆದ ಕಾರಣ ಮದುವೆಗೆ ಕುಟುಂಬಸ್ಥರು ಒಪ್ಪಿರಲಿಲ್ಲವಂತೆ. ಕರೊನಾ ಲಾಕ್​ಡೌನ್​ ವೇಳೆ ಮೇಘಾಳಿಗೆ ಮದುವೆ ಮಾಡಲು ಪೋಷಕರು ಬೇರೆ ಕಡೆ ಸಂಬಂಧ ನೋಡುತ್ತಿದ್ದರಂತೆ. ಇದನ್ನರಿತ ಮೇಘಾ ಮನೆ ಬಿಟ್ಟು ಪ್ರಿಯಕರನೊಂದಿಗೆ ಹೋಗಿದ್ದಳು. 2020ರ ಡಿಸೆಂಬರ್​ 2ರಂದು ಇವರಿಬ್ಬರೂ ಮದುವೆ ಮಾಡಿಕೊಂಡಿದ್ದು, ಮುಂಡರಗಿಯ ಸಬ್​ ರಿಜಿಸ್ಟರ್​ ಕಚೇರಿಯಲ್ಲಿ 2021ರ ಜನವರಿ 5ರಂದು ರಿಜಿಸ್ಟರ್​ ಮಾಡಿಸಿದ್ದರು. ಬಳಿಕ ಗೋವಾದಲ್ಲಿ ತಂಗಿದ್ದರು. ಈ ವಿಚಾರ ತಿಳಿದ ಮೇಘಾ ಪಾಲಕರು ಕರೆ ಮಾಡಿ ಬೆದರಿಕೆ ಹಾಕಿದ್ದರಿಂದ ಮೊಬೈಲ್​ ಸ್ವಿಚ್​ ಆಫ್​​ ಮಾಡಿಕೊಂಡಿದ್ದರಂತೆ. ಇದೀಗ ಊರಿಗೆ ವಾಪಸ್​ ಬರುತ್ತಿದ್ದೇವೆ. ನಮಗೆ ರಕ್ಷಣೆ ಕೊಡಬೇಕು ಎಂದು ಯುವತಿ ಎಸ್​ಪಿಗೆ ಮನವಿ ಮಾಡಿದ್ದಾಳೆ. ಪ್ರೇಮಿಗಳಿಗೆ ರಕ್ಷಣೆ ನೀಡುವುದಾಗಿ ಎಸ್​ಪಿ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net