ಮಾಜಿ ಪತಿಯ ಮೇಲೆ ಸೇಡು ತೀರಿಸಿಕೊಳ್ಳಲು ಆಕೆ ಮಾಡಿದ್ದೇನು?: ಮರುಮದುವೆಯ ಪಿತೂರಿ ತಂದಿಟ್ಟ ಶಾಕ್​ !

women remarriage
Published on

ಪ್ಯಾರಿಸ್​: ಪತಿಯ ಮೇಲೆ ಸಿಟ್ಟಾಗಿ ಆತನನ್ನು ಬಿಟ್ಟು ಹೋಗುವುದು ಅಥವಾ ಅವನೊಂದಿಗೆ ಜಗಳವಾಡಿಕೊಂಡು ಅದು ಹಲ್ಲೆಯವರೆಗೂ ಹೋಗುವುದು ಕೇಳಿರುತ್ತೀರಿ. ಆದರೆ ಇಲ್ಲೊಬ್ಬ ಮಹಿಳೆ ತನ್ನ ಮಾಜಿ ಪತಿಯ ಮೇಲೆ ಸಿಟ್ಟು ತೀರಿಸಿಕೊಳ್ಳಬೇಕೆಂಬ ಕಾರಣಕ್ಕೆ ಆತನೊಂದಿಗೇ ಮರುಮದುವೆಯಾಗಿದ್ದಾಳೆ. ಅದರಲ್ಲೂ ಆತನಿಗೆ ಗೊತ್ತಿಲ್ಲದಂತೆ ಆತನೊಂದಿಗೆ ಮದುವೆಯಾಗಿರುವುದು ವಿಶೇಷ.

ಫ್ರಾನ್ಸ್​ನಲ್ಲಿ ಉನ್ನತ ನ್ಯಾಯಧೀಶೆಯಾಗಿ ಕೆಲಸ ಮಾಡುತ್ತಿರುವ 57 ವರ್ಷದ ಮಹಿಳೆ ತನ್ನ ಗಂಡನೊಂದಿಗೆ ಬದುಕಲು ಸರಿಹೊಂದಿಲ್ಲವೆಂಬ ಕಾರಣಕ್ಕೆ ಆತನಿಂದ ವಿಚ್ಛೇದನ ಪಡೆದಿದ್ದಳು. ವಿಚ್ಛೇದನ ಪಡೆದ ಪತಿ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿ ಸಂಸಾರವನ್ನು ಆರಂಭಿಸಿದ್ದಾನೆ. ಈ ವಿಚಾರವಾಗಿ ಮಹಿಳೆಗೆ ಸಿಟ್ಟಿತ್ತಂತೆ. ಅದೇ ಸಮಯಕ್ಕೆ ಸರಿಯಾಗಿ ಆಕೆಯನ್ನು ಬೇರೊಂದು ನ್ಯಾಯಾಲಯಕ್ಕೆ ಕೆಳಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಒಂದತ್ತ ಮಾಜಿ ಪತಿಯ ಮೇಲಿನ ಸಿಟ್ಟು ಇನ್ನೊಂದತ್ತ ತನ್ನ ವೃತ್ತಿಯಲ್ಲಾದ ಹಿನ್ನೆಡೆಯಿಂದ ಬೇಸರಗೊಂಡ ಮಹಿಳೆ ಮಾಜಿ ಪತಿಯ ಮೇಲೆ ಹೇಗಾದರೂ ದ್ವೇಷ ತೀರಿಸಿಕೊಳ್ಳಬೇಕೆಂದು ಯೋಚಿಸಿದ್ದಾಳೆ. ತಾನು ನ್ಯಾಯಾಂಗ ವ್ಯವಸ್ಥೆಯಲ್ಲಿದ್ದ ಕಾರಣ ತಾನಿದ್ದ ಸ್ಥಳದಲ್ಲೇ ಬೇರೊಬ್ಬ ಪುರಷನನ್ನು ತನ್ನ ಮಾಜಿ ಪತಿಯಂತೆ ಬಿಂಬಿಸಿ ನಕಲು ಸಹಿ ಮಾಡುವ ಮೂಲಕ ಮದುವೆಯಾಗಿದ್ದಾಳೆ. ಆಕೆ ಮಾಜಿ ಪತಿಯೊಂದಿಗೆ ಮರು ಮದುವೆಯಾಗಿ ಕೆಲ ವಾರಗಳು ಕಳೆದರೂ ಈ ವಿಚಾರ ಮಾಜಿ ಪತಿ ಸೇರಿ ಯಾರೊಬ್ಬರಿಗೂ ತಿಳಿದುಬಂದಿಲ್ಲ.

ಮಹಿಳೆ ಮರುಮದುವೆಯಾಗಿ ಕೆಲ ವಾರಗಳಲ್ಲಿ ಆಕೆಯನ್ನು ಮತ್ತೊಮ್ಮೆ ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡಲಾಗಿದೆ. ಅದುವರೆಗೂ ತನ್ನ ಹಿಡಿತದಲ್ಲಿ ಬಚ್ಚಿಟ್ಟುಕೊಂಡಿದ್ದ ಮರುಮದುವೆಯ ವಿಚಾರ ಆಗ ಆಕೆಯ ಸಹೋದ್ಯೋಗಿಗಳಿಗೆ ತಿಳಿದುಬಂದಿದೆ. ಈ ವಿಷಯ ಬಹಿರಂಗವಾಗಿದ್ದು ಆಕೆಯ ಮಾಜಿ ಪತಿಗೂ ತಲುಪಿದೆ.

ಸದ್ಯ ಮಹಿಳೆ, ಆಕೆಗೆ ಗಂಡನಂತೆ ನಾಟಕವಾಡಿದ ವ್ಯಕ್ತಿ ಮತ್ತು ಅದಕ್ಕೆ ಸಹಾಯ ಮಾಡಿದ ಮಹಿಳೆಯ ಮಗಳನ್ನು ನ್ಯಾಯಾಂಗ ಬಂಧನಕ್ಕೆ ತೆಗೆದುಕೊಳ್ಳಲಾಗಿದೆ. ನಕಲು ಸಹಿ ಮಾಡಿ ಮೋಸ ಮಾಡಿದ ಪ್ರಕರಣದಡಿಯಲ್ಲಿ ಆಕೆಗೆ 10 ವರ್ಷಗಳ ಜೈಲು ಮತ್ತು 1,50,000 ಯುರೋಗಳ ದಂಡವನ್ನು ಹಾಕಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net