ಬದುಕು ಮುಳುಗಿಸಿದ ಪ್ರವಾಹ

scs
Published on

ಬೆಂಗಳೂರು: ಭೀಕರ ಬರಗಾಲದಿಂದ ಕಂಗೆಟ್ಟಿದ್ದ ರಾಜ್ಯದ ಮೇಲೆ ಕೃಪೆ ತೋರಿ ತಂಪೆರೆದಿದ್ದ ಮಳೆರಾಯನ ಆರ್ಭಟಕ್ಕೆ ರೈತರು ಕಂಗಾಲಾಗಿದ್ದಾರೆ. ಬಿಟ್ಟೂ ಬಿಡದೆ ಸುರಿದ ಮಳೆಯಿಂದಾಗಿ ರಾಜ್ಯದ ಜಲಾಶಯಗಳು ಮೈದುಂಬಿ ಅಪಾರ ಪ್ರಮಾಣದ ನೀರು ಹರಿಬಿಟ್ಟಿರುವುದು ಅನ್ನದಾತರ ಬದುಕನ್ನೇ ಮುಳುಗಿಸಿದೆ. ನದಿ, ಜಲಾಶಯಗಳಿಂದ ಬೋರ್ಗರೆಯುತ್ತಿರುವ ನೀರು ನದಿಪಾತ್ರದ ಜಮೀನುಗಳಿಗೆ ನುಗ್ಗುತ್ತಿರುವ ಪರಿಣಾಮ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಎದೆಯೆತ್ತರಕ್ಕೆ ನಿಂತ ನೀರಿನಲ್ಲಿ ಬಿತ್ತನೆ ಮಾಡಿದ ಪೈರು ಮೊಳಕೆಯೊಡೆಯುವ ಹಂತದಲ್ಲೇ ಕೊಳೆಯುತ್ತಿರುವುದು ರೈತರನ್ನು ಕಣ್ಣೀರಿನಲ್ಲಿ ಮುಳುಗಿಸಿದೆ.

ಉತ್ತರಕ್ಕೆ ಆಘಾತ: ರಾಜ್ಯದ ಜತೆಗೆ ನೆರೆಯ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ 7ಕ್ಕೂ ಹೆಚ್ಚು ನದಿಗಳು ಮೈದುಂಬಿ ಹರಿಯುತ್ತಿವೆ. ಪರಿಣಾಮ ವಿವಿಧ ತಾಲೂಕುಗಳ ಸಾವಿರಾರ ಎಕರೆ ಜಮೀನು ಜಲಾವೃತಗೊಂಡಿದೆ. ಬೆಳಗಾವಿ, ಬಾಗಲಕೋಟೆ, ಹಾವೇರಿ, ಉತ್ತರ ಕನ್ನಡದಲ್ಲಿ ಹೆಚ್ಚು ಬೆಳೆ ಹಾನಿಯಾಗಿದೆ. ಬೆಳಗಾವಿಯ ಐದಕ್ಕೂ ಹೆಚ್ಚು ತಾಲೂಕುಗಳ ವ್ಯಾಪ್ತಿಯಲ್ಲಿ ಪ್ರವಾಹವಿದ್ದು, ಹತ್ತಾರು ಸೇತುವೆಗಳು ಮುಳುಗಡೆ ಆಗಿದೆ. ಸಾವಿರಾರು ಹೆಕ್ಟೇರ್ ಕೃಷಿ ಪ್ರದೇಶ ಜಲಾವೃತವಾಗಿದೆ. ಮಳೆ, ನೆರೆ ಮುಂದುವರಿದಿರುವ ಪರಿಣಾಮ ನಷ್ಟದ ಒಟ್ಟಾರೆ ಅಂದಾಜು ಇನ್ನಷ್ಟೇ ಸಿಗಬೇಕಿದೆ. ಹಾವೇರಿ ಜಿಲ್ಲೆಯಲ್ಲಿ ಮೆಕ್ಕೆಜೋಳ, ಶೇಂಗಾ, ಸೋಯಾಬಿನ್, ಹತ್ತಿ, ಬೆಳ್ಳುಳ್ಳಿ, ಹಾಗಲಕಾಯಿ, ಮೆಣಸಿನಕಾಯಿ, ವೀಳ್ಯದೆಲೆ, ಇತರ ಬೆಳೆಗಳಿಗೆ ಹಾನಿಯುಂಟಾಗಿದೆ.

ವಾಡಿಕೆಗಿಂತ ಮಳೆ ಹೆಚ್ಚು: ಎರಡು ತಿಂಗಳಲ್ಲಿ ಕರಾವಳಿ ವ್ಯಾಪ್ತಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲಿ ಬರೋಬ್ಬರಿ 2,306 ಮಿ.ಮೀ., ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗಿನಲ್ಲಿ 1,110 ಮಿ.ಮೀ. ಮಳೆಯಾಗಿದೆ. ಇದು 3 ವರ್ಷಗಳಲ್ಲೇ ವಾಡಿಕೆಗಿಂತ ಅಧಿಕ ಪ್ರಮಾಣದ ಮಳೆ ಬಿದ್ದಿದೆ. ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ವಾಡಿಕೆಯಂತೆ 134 ಮಿ.ಮೀ. ಮಳೆ ಸುರಿಯಬೇಕಿತ್ತು. 195 ಮಿ.ಮೀ. ಬಿದ್ದಿದ್ದು, ವಾಡಿಕೆಗಿಂತ ಶೇ.46 ಮಳೆ ಸುರಿದಿದೆ. ಉತ್ತರ ಕರ್ನಾಟಕದಲ್ಲಿ ವಾಡಿಕೆಯಂತೆ 204 ಮಿ.ಮೀ. ಮಳೆಯಾಗಬೇಕಿತ್ತು. 274 ಮಿ.ಮೀ. ಬಿದ್ದಿದೆ. ವಾಡಿಕೆಗಿಂತ ಶೇ.35 ಹೆಚ್ಚು ವರ್ಷಧಾರೆಯಾಗಿದೆ.

62 ಲಕ್ಷ ಹೆಕ್ಟೇರ್​ನಲ್ಲಿ ಬಿತ್ತನೆ: ರಾಜ್ಯದಲ್ಲಿ ಉತ್ತಮ ಮಳೆ ಸುರಿದ ಪರಿಣಾಮ ಈವರೆಗೆ 62 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. 23.99 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶಗಳ ಪೈಕಿ 15 ಲಕ್ಷ ಹೆಕ್ಟೇರ್​ಗಳಲ್ಲಿ ಏಕಧಾನ್ಯ, ದ್ವಿದಳ ಧಾನ್ಯ, ಎಣ್ಣೆ ಕಾಳುಗಳು, ವಾಣಿಜ್ಯ ಬೆಳೆ ಬಿತ್ತನೆ ಮಾಡಲಾಗಿದೆ. 58.49 ಲಕ್ಷ ಹೆಕ್ಟೇರ್ ಪ್ರದೇಶಗಳು ಮಳೆ ಅವಲಂಬಿಸಿದ್ದು, ಈವರೆಗೆ 47 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಭತ್ತ, ಜೋಳ, ರಾಗಿ, ಮೆಕ್ಕೆಜೋಳ, ಗೋಧಿ, ತೊಗರಿ, ಕಡಲೆ, ಹುರುಳಿ, ಉದ್ದು, ಹೆಸರು, ಅಲಸಂಧೆ, ಅವರೆ, ಮಟಕಿ, ಶೇಂಗಾ, ಎಳ್ಳು, ಸೂರ್ಯಕಾಂತಿ, ಹರಳಿ, ಹಿಚ್ಚೆಳ್ಳು, ಸೋಯಾ ಅವರೆ, ಅಗಸೆ, ಹತ್ತಿ, ಕಬ್ಬು ಮತ್ತು ತಂಬಾಕು ಸೇರಿ ವಿವಿಧ ಬೀಜಗಳನ್ನು ಬಿತ್ತನೆ ಮಾಡಲಾಗಿದೆ. ಪ್ರವಾಹದಿಂದಾಗಿ ಈ ಬೆಳೆಗಳಲ್ಲಿ ಎಷ್ಟು ಕೈಗೆ ಬರುವುದೆಂಬ ಆತಂಕ ಸೃಷ್ಟಿಯಾಗಿದೆ.

ದಕ್ಷಿಣದಲ್ಲಿ ಕೊಂಚ ಹಾನಿ: ಉತ್ತರದ ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣ ರಾಜ್ಯದಲ್ಲಿ ಬೆಳೆ ಹಾನಿ ಸ್ವಲ್ಪಮಟ್ಟಿಗಷ್ಟೇ ಇದೆ. ಕೆಆರ್​ಎಸ್ ಜಲಾಶಯ ವ್ಯಾಪ್ತಿಯ ಕೆಲವೆಡೆ ನೆರೆ ಇದ್ದರೂ ಭಾರಿ ಹಾನಿಯಾಗಿಲ್ಲ. ನೂರಾರು ಎಕರೆ ಕೃಷಿ ಭೂಮಿಗೆ ನೀರು ನುಗ್ಗಿದ್ದರೂ ಎರಡು ಮೂರು ದಿನಗಳಲ್ಲಿ ತಗ್ಗುವ ಸಾಧ್ಯತೆ ಇದೆ. ಹಾಗೆಯೇ ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಕಾಫಿಗೆ ಹಾನಿಯಾಗಿದ್ದರೂ ಅಂದಾಜು ಸಿಕ್ಕಿಲ್ಲ. ಗದ್ದೆಗಳಿಗೆ ನುಗ್ಗಿದ ನೀರು ತಗ್ಗುತ್ತಿರುವ ಪರಿಣಾಮ ರೈತರು ಕೊಂಚ ನೆಮ್ಮದಿಯಿಂದಿದ್ದಾರೆ.

 ರಾಯಚೂರು ಜಿಲ್ಲೆ

  • ಕೃಷ್ಣಾ ನದಿ ತೀರದ ಕೃಷಿ ಜಮೀನುಗಳು ಜಲಾವೃತ
  • ಹತ್ತಿ , ತೊಗರಿ ಸೇರಿದಂತೆ ಸ್ವಲ್ಪಮಟ್ಟಿನ ಬೆಳೆಹಾನಿ
  • ನೀರಿನ ಹೊರಹರಿವು ಹೆಚ್ಚಾದರೆ ಭತ್ತಕ್ಕೂ ಕಂಟಕ

* ಕೊಪ್ಪಳ ಜಿಲ್ಲೆ

  • ಮುನಿರಾಬಾದ್ ಜಲಾಶಯ ಬಳಿ ಪ್ರವಾಹ
  • ನದಿ ಸನಿಹದ ಭತ್ತದ ಗದ್ದೆಗಳು ಜಲಾವೃತ
  • ಹಿನ್ನೀರು ಭಾಗದ ಬಿತ್ತಿದ ಬೆಳೆಗಳು ಮುಳುಗಡೆ

* ವಿಜಯನಗರ ಜಿಲ್ಲೆ

  •  ವೆಂಕಟಾಪುರ, ಕಮಲಾಪುರ, ಬುಕ್ಕಸಾಗರ ತತ್ತರ
  • ಕೆಲವೆಡೆ ಭತ್ತ, ಬಾಳೆಗೆ ಸ್ವಲ್ಪ ಪ್ರಮಾಣದಲ್ಲಿ ಹಾನಿ
  • ಹಡಗಲಿಯಲ್ಲಿ ಕೆಲ ಜಮೀನುಗಳಿಗೆ ನುಗ್ಗಿದ ನೀರು

* ಬೆಳಗಾವಿ ಜಿಲ್ಲೆ

  •   3,242 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶ
  • 15.29 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ
  • ಬಟಾಣಿ, ಗಜ್ಜರಿ, ಆಲೂಗಡ್ಡೆ ಬೆಳೆ ನಾಶ

* ಬಾಗಲಕೋಟೆ

  • ಕೃಷ್ಣೆ, ಘಟಪ್ರಭೆ ವ್ಯಾಪ್ತಿಯಲ್ಲಿ ಭಾರಿ ನೆರೆ
  • ಒಟ್ಟಾರೆ 15450 ಹೆಕ್ಟೇರ್ ಕೃಷಿ ಬೆಳೆ ಹಾನಿ
  • 301 ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟ

* ಉತ್ತರ ಕನ್ನಡ

  •  ಒಟ್ಟಾರೆ 3800 ಹೆಕ್ಟೇರ್​ನಲ್ಲಿ ಬೆಳೆ ಹಾನಿ
  • 3.7 ಹೆಕ್ಟೇರ್ ಅಡಕೆ, ತೋಟದ ಬೆಳೆ ನಷ್ಟ
  • 10 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗೆ ಹಾನಿ

* ಹಾವೇರಿ

  •  3,696 ಹೆಕ್ಟೇರ್ ಪ್ರದೇಶಗಳಲ್ಲಿ ಬೆಳೆ ನಷ್ಟ
  • 392 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ
  • ಜೋಳ, ಶೇಂಗಾ, ಸೋಯಾಬಿನ್ ನಾಶ

* ವಿಜಯಪುರ

  • ಆಲಮಟ್ಟಿ ಅಣೆಕಟ್ಟೆ ಬಳಿ ಅಲ್ಲಲ್ಲಿ ಬೆಳೆ ಹಾನಿ
  • ಜಲಾಶಯದ ಹಿನ್ನೀರು ಪ್ರದೇಶದಲ್ಲಿ ನಷ್ಟ
  • ಹೊರಹರಿವು ಹೆಚ್ಚಾದಲ್ಲಿ ಇನ್ನಷ್ಟು ಹಾನಿ

* ಬಳ್ಳಾರಿ

  • ತುಂಗಭದ್ರಾ ಹರಿವು 1.50 ಲಕ್ಷ ಕ್ಯುಸೆಕ್
  • ತಗ್ಗು ಪ್ರದೇಶಗಳಲ್ಲಿ ಬಾಳೆ, ಕಬ್ಬುಜಲಾವೃತ

ಉತ್ತರದ ಸ್ಥಿತಿ ಗಂಭೀರ

ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕ್ಷೀಣಿಸಿದ್ದರೂ ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಾಜ್ಯದ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆ ತತ್ತರಿಸಿವೆ. ಅದೇ ರೀತಿ ತುಂಗಭದ್ರಾ ಪ್ರವಾಹದಿಂದಾಗಿ ವಿಜಯನಗರ, ರಾಯಚೂರು ಜಿಲ್ಲೆಗಳಲ್ಲಿ ನೆರೆ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಉಲ್ಬಣಿಸುತ್ತಿದೆ.

ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿದೆ. ಮಲಪ್ರಭಾ, ಘಟಪ್ರಭಾ, ವೇದಗಂಗಾ, ದೂಧಗಂಗಾ ನದಿಗಳ ಭೋರ್ಗರೆತಕ್ಕೆ ಹಲವು ಗ್ರಾಮಗಳು ಮುಳುಗಡೆಯಾಗಿವೆ. ಕೃಷ್ಣಾ ನದಿ ಪ್ರವಾಹಕ್ಕೆ ಚಿಕ್ಕೋಡಿ, ಅಥಣಿ, ರಾಯಬಾಗ ತಾಲೂಕುಗಳನ್ನು ಪೇಚಿಗೆ ಸಿಲುಕಿಸಿದೆ. ಮಸಗುಪ್ಪಿ ಮತ್ತು ಅಡಿಬಟ್ಟಿ ಗ್ರಾಮಗಳು ಸಂಪೂರ್ಣ ನೀರಿನಿಂದ ಆವೃತವಾಗಿ ನೂರಾರು ಮನೆಗಳು, ಸಾವಿರಾರು ಎಕರೆ ಜಮೀನು ಮುಳುಗಡೆಯಾಗಿದೆ. ಗೋಕಾಕ ನಗರ ಕೊನ್ನೂರು ಪಟ್ಟಣ ಮಳೆ ನೀರಿನಿಂದ ತುಂಬಿದೆ.

ಮಲಪ್ರಭಾ ನದಿ ಹಾಗೂ ನವಿಲುತೀರ್ಥ ಜಲಾಶಯದಿಂದ ನದಿಗೆ ಭಾರಿ ಪ್ರಮಾಣದ ನೀರು ಹರಿಬಿಟ್ಟಿದ್ದರಿಂದ ರಾಮದುರ್ಗ ಪಟ್ಟಣ ಬಳಿ ತೇರ್​ಬಜಾರ್ ಸೇತುವೆ ಮುಳುಗಿ ಸಂಪರ್ಕ ಕಡಿತಗೊಂಡಿದೆ. ಘಟಪ್ರಭಾ ಅಬ್ಬರಕ್ಕೆ ಬೆಳಗಾವಿ, ಗೋಕಾಕ, ಹಲವು ಗ್ರಾಮಗಳು ಮುಳುಗಿ ಹೋಗಿವೆ. ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯ, ಸವದತ್ತಿಯ ತಾಲೂಕಿನ ನವಿಲುತೀರ್ಥ ಜಲಾಶಯಗಳಿಂದ ನೀರು ಬಿಡುಗಡೆ ಮಾಡಿರುವುದರಿಂದ ನದಿಪಾತ್ರದ ಗ್ರಾಮಗಳು ಮತ್ತು ಹೊಲಗದ್ದೆಗಳು ಜಲಾವೃತಗೊಂಡಿವೆ.

ಪ್ರವಾಹದ ಹಿನ್ನೆಲೆಯಲ್ಲಿ ಅಥಣಿ, ಕಾಗವಾಡ, ಚಿಕ್ಕೋಡಿ, ನಿಪ್ಪಾಣಿ, ಗೋಕಾಕ, ಮೂಡಲಗಿ, ಹುಕ್ಕೇರಿ ತಾಲೂಕಿನಲ್ಲಿ 48 ಕಾಳಜಿ ಕೇಂದ್ರಗಳನ್ನು ಆರಂಭಿಸಿ 2,450 ಕುಟುಂಬಗಳ ರಕ್ಷಣೆ ಮಾಡಲಾಗಿದೆ. 8 ಸಾವಿರ ಸಂತ್ರರನ್ನು ರಕ್ಷಣೆ ಮಾಡಲಾಗಿದೆ. 2,065 ಸಂತ್ರಸ್ತರು ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ.

ರೈತನ ಮೃತ ದೇಹ ಪತ್ತೆ: ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ ನದಿ ಅಪಾಯಕಾರಿ ಮಟ್ಟದಲ್ಲಿ ಆರ್ಭಟಿಸುತ್ತಿದೆ. ಜು. 26 ರಂದು ಜಮೀನಿಗೆ ಮೇವು ತರಲು ಹೋಗಿ ಪ್ರವಾಹದಲ್ಲಿ ಸಿಲುಕಿದ್ದ ಜಮಖಂಡಿ ತಾಲೂಕಿನ ಆಲಗೂರ ಗ್ರಾಮದ ರೈತ ಸಿದ್ದಪ್ಪ ಆಡೋಳ್ಳಿ (65)ಅವರ ಮೃತ ದೇಹ ಸೋಮವಾರ ಪತ್ತೆಯಾಗಿದೆ.

ಮುಂದುವರಿದ ಪ್ರವಾಹ: ತುಂಗಭದ್ರಾ ಜಲಾಶಯದ ಒಳಹರಿವು ಇನ್ನೂ ತಗ್ಗುತ್ತಿಲ್ಲ. ಸೋಮವಾರವೂ 33 ಗೇಟ್​ಗಳನ್ನು ತೆರೆದು ನದಿಗೆ ಒಂದು ಲಕ್ಷ ಕ್ಯೂಸೆಕ್​ಗೂ ಅಧಿಕ ನೀರನ್ನು ನದಿಗೆ ಹರಿಸಲಾಗಿದೆ. ಈಗಾಗಲೇ ಹಂಪಿಯಲ್ಲಿ ಪುರಂದರದಾಸರ ಮಂಟಪ ಸೇರಿದಂತೆ ಇತರೆ ಮಂಟಪಗಳು ಸಂಪೂರ್ಣ ಮುಳುಗಡೆಯಾಗಿವೆ. ರಘುನಂದನ ತೀರ್ಥರ ಬೃಂದಾವನ, ಸುಗ್ರೀವ ಗುಹೆ, ಸೀತೆ ಸೆರಗು, ವಿಷ್ಣುವಿನ ದಶಾವತಾರ ಉಬ್ಬು ಶಿಲ್ಪಗಳು, ಕೋಟಿಲಿಂಗ ಜಲಾವೃತವಾಗಿವೆ. ಹಂಪಿಯ ಚಕ್ರತೀರ್ಥದ ಬಳಿ ಭಾರಿ ಪ್ರಮಾಣದಲ್ಲಿ ನೀರು ನದಿಯಲ್ಲಿ ಹರಿಯುತ್ತಿದೆ.

ಕಾರ್ಯಾಚರಣೆ ಸ್ಥಗಿತಕ್ಕೆ ಕೇರಳ ವಿರೋಧ: ಅಂಕೋಲಾ ತಾಲೂಕು ಶಿರೂರು ಗುಡ್ಡ ಜರಿತ ಸ್ಥಳದಲ್ಲಿ ಕಾರ್ಯಾಚರಣೆ ಸ್ಥಗಿತ ಮಾಡಿರುವುದಕ್ಕೆ ಕೇರಳ ತೀವ್ರ ವಿರೋಧ ವ್ಯಕ್ತಪಡಿಸಿದೆ. ಅಂಕೋಲಾದಲ್ಲಿ ಬೀಡು ಬಿಟ್ಟಿರುವ ಕೇರಳದ ಶಾಸಕರಾದ ವಿಜಿನ್ ಹಾಗೂ ರಾಜಗೋಪಾಲನ್ ಇದಕ್ಕೆ ತಮ್ಮ ಆಕ್ಷೇಪವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕ ಸತೀಶ ಸೈಲ್ ಅವರಿಗೆ ತಿಳಿಸಿದ್ದಾರೆ. ಕೇರಳ ತ್ರಿಶೂರ್​ನಲ್ಲಿ ನೀರಿನಲ್ಲಿ ತೇಲುತ್ತ ಮಣ್ಣು ತೆಗೆಯುವ ಬಾರ್ಜ್ ಯಂತ್ರವಿದ್ದು, ಅದನ್ನು ತರಿಸುವ ಬಗ್ಗೆ ಅಲ್ಲಿನ ಶಾಸಕರು ಆಸಕ್ತಿ ತೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net