ಕಾಡುಗೋಡಿ ಮೀಸಲು ಅರಣ್ಯ ಪ್ರದೇಶದಲ್ಲಿ ಅಗ್ನಿ ಅವಘಡ: 20 ಎಕರೆಯಷ್ಟು ಒಣ ಹುಲ್ಲು ಬೆಂಕಿಗೆ ಆಹುತಿ

ಕಾಡುಗೋಡಿ ಮೀಸಲು ಅರಣ್ಯ ಪ್ರದೇಶದಲ್ಲಿ ಅಗ್ನಿ ಅವಘಡ: 20 ಎಕರೆಯಷ್ಟು ಒಣ ಹುಲ್ಲು ಬೆಂಕಿಗೆ ಆಹುತಿ
Published on

ಬೆಂಗಳೂರು : ನಗರದ ಹೊರವಲಯದ ಕಾಡುಗೋಡಿ ಮೀಸಲು ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಭಾರಿ ಪ್ರಮಾಣದಲ್ಲಿ ಹೊಗೆ ವ್ಯಾಪಿಸಿ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು.
ನೂರಾರು ಎಕರೆಯಷ್ಟು ವಿಸ್ತೀರ್ಣದಲ್ಲಿರುವ ಐಟಿಪಿಎಲ್ ಮುಂಭಾಗದಲ್ಲಿರುವ ಪಟ್ಟಂದೂರು ಮೆಟ್ರೊ ನಿಲ್ದಾಣ ಸಮೀಪದ ಮೀಸಲು ಅರಣ್ಯ ಪ್ರದೇಶದಲ್ಲಿ ಭಾನುವಾರ ೧೨ ರಿಂದ ೧೨.೩೦ ರ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಬೆಂಕಿ ಎಲ್ಲೆಡೆ ವ್ಯಾಪಿಸತೊಡಗಿದೆ. ಘಟನೆಯ ಕುರಿತು ಸ್ಥಳೀಯರು ಅಗ್ನಿ ಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಾಲ್ಕಕ್ಕೂ ಅಧಿಕ ಅಗ್ನಿ ಶಾಮಕ ವಾಹನಗಳೊಂದಿಗೆ ಧಾವಿಸಿದ ಸಿಬ್ಬಂದಿ ಸತತ ೬ ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಅವಘಡದಿಂದ ಮರಗಳಿಗೆ ಯಾವುದೇ ಹಾನಿಯಾಗಿಲ್ಲ. ಆದರೆ ನೆಲದ ಮೇಲಿನ ಒಣ ಹುಲ್ಲಿಗೆ ಮತ್ತು ಮರದ ತುಂಡುಗಳಿಗೆ ಬೆಂಕಿ ತಗುಲಿ ಉರಿದುಕೊಂಡು ಹೋಗಿದ್ದು, ೧೫ ರಿಂದ ೨೦ ಎಕರೆಯಷ್ಟು ಪ್ರದೇಶ ಬೆಂಕಿಗೆ ಆಹುತಿಯಾಗಿದ್ದು, ಸಂಜೆ ೭ ಗಂಟೆವರೆಗೂ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಗಿದೆ. ಘಟನೆ ನಡೆದ ಸ್ಥಳದ ಸುತ್ತ ಮುತ್ತ ಕೆಲ ಖಾಸಗಿ ಕಂಪನಿಗಳಿದ್ದು, ಜನವಸತಿ ಪ್ರದೇಶವಿಲ್ಲ ಹೀಗಾಗಿ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net