

ಬೆಂಗಳೂರು: ಎಲ್ಲೆಡೆ ದಟ್ಟವಾದ ಹೊಗೆ… ಜೋರಾಗಿ ಚೀರಾಡುತ್ತಾ ಹೊರಗೆ ಓಡಿ ಬಂದ ಸಿಬ್ಬಂದಿ… ಮತ್ತೆ ಕೆಲವರು ಜೀವಭಯದಿಂದ ಟೆರೆಸ್ ಮೇಲೆ ಹೋಗಿ ಜೀವ ಉಳಿಸಿಕೊಂಡರು. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸಿಬ್ಬಂದಿಯ ರಕ್ಷಣೆ ಮಾಡಿದರು. ಈ ಎಲ್ಲಾ ಭಯನಕ ದೃಶ್ಯಗಳು ಕಂಡುಬಂದದ್ದು. ಆರ್.ಟಿ.ನಗರದ ಬಹುಮಹಡಿ ಕಟ್ಟಡದಲ್ಲಿ ನಡೆದ ಅಗ್ನಿ ಅವಘಡದಲ್ಲಿ.
ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಆರ್.ಟಿ.ನಗರದ ೮೦ ಅಡಿ ರಸ್ತೆಯಲ್ಲಿ ಐದು ಅಂತಸ್ತಿನ ಕಟ್ಟಡದ ನೆಲಮಹಡಿಯಲ್ಲಿ ಶುಕ್ರವಾರ ಮಧ್ಯಾಹ್ನ ೧.೧೫ರ ಸುಮಾರಿಗೆ ಅಗ್ನಿ ಅವಘಡ ನಡೆದಿದೆ. ಈ ಕಟ್ಟಡದಲ್ಲಿ ಮಿರಾಕಲ್ ಡ್ರಿಂಕ್ಸ್, ಐಡಿಎಸ್ ನೆಕ್ಸ್ಟ್ ಬಿಜಿನೆಸ್ ಸಲ್ಯೂಷನ್ಸ್ ಪ್ರೈವೆಟ್ ಲಿಮಿಟೆಡ್, ವೆಡ್ ಎಲಿಕ್ಸಿರ್ ಗ್ಲೋಬಲ್ ಪ್ರೈವೆಟ್ ಲಿಮಿಟೆಡ್ ಕಂಪನಿಗಳಿದ್ದು, ಸುಮಾರು ೬೦ ಮಂದಿ ಕೆಲಸ ಮಾಡುತ್ತಾರೆ. ಮಧ್ಯಾಹ್ನ ೧.೧೫ರ ವೇಳೆ ಏಕಾಏಕಿ ಕಟ್ಟಡದ ನೆಲಮಹಡಿಯ ಜನರೇಟರ್ ಬಳಿ ದಟ್ಟವಾದ ಹೊಗೆ ಕಾಣಿಸಿಕೊಂಡು ಕೆಲವೇ ಕ್ಷಣದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಅಲ್ಲೇ ಸುಮಾರು ೨೫ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗಿತ್ತು. ಈ ಪೈಕಿ ಅಂದಾಜು ೨೦ ದ್ವಿಚಕ್ರ ವಾಹನಗಳಿಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿವೆ. ಅಂತೆಯೆ ನೆಲಮಹಡಿಯಲ್ಲಿದ್ದ ಸ್ಟೋರ್ ರೂಮ್‌ಗೆ ಬೆಂಕಿ ತಾಕಿ ಅದರಲ್ಲಿದ್ದ ವಸ್ತುಗಳು ಬೆಂಕಿಗಾಹುತಿಯಾಗಿವೆ.
ನೆಲಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡ ಬೆನ್ನಲ್ಲೇ ಮೊದಲ ಮತ್ತು ಎರಡನೇ ಮಹಡಿಯಲ್ಲಿ ದಟ್ಟ ಹೊಗೆ ಆವರಿಸಿದೆ. ಅಷ್ಟರಲ್ಲಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆರಂಭದಲ್ಲಿ ಒಂದು ಅಗ್ನಿಶಾಮಕ ವಾಹನದಲ್ಲಿ ಬೆಂಕಿ ನಂದಿಸಲು ಪ್ರಯತ್ನಿಸಲಾಯಿತು. ಆದರೆ, ಬೆಂಕಿಯ ಜ್ವಾಲೆ ಹೆಚ್ಚಾದ ಹಿನ್ನೆಲೆಯಲ್ಲಿ ಮತ್ತೆ ಮೂರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕರೆಸಿಕೊಂಡು ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಗಿದೆ.
ಚೀರಾಡುತ್ತಾ ಓಡಿದ ಸಿಬ್ಬಂದಿ:
ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಂಪನಿಯ ಸಿಬ್ಬಂದಿ ಜೋರಾಗಿ ಚೀರಾಡುತ್ತಾ ಹೊರಗೆ ಓಡಿ ಬಂದಿದ್ದಾರೆ. ಕೆಲ ಸಿಬ್ಬಂದಿ ಜೀವ ಭಯದಲ್ಲಿ ಕಟ್ಟಡದ ಟೆರಸ್ ಮೇಲೆ ಓಡಿದ್ದಾರೆ. ಅಷ್ಟರಲ್ಲಿ ಅಗ್ನಿಶಾಮಕ ಸಿಬ್ಬಂದಿ ಪಕ್ಕದ ಕಟ್ಟಡಕ್ಕೆ ದೊಡ್ಡ ಏಣಿ ಹಾಕಿ ಬೆಂಕಿ ಹೊತ್ತಿ ಉರಿಯುತ್ತಿದ್ದ ಕಟ್ಟಡಕ್ಕೆ ಸಂಪರ್ಕ ಸಾಧಿಸಿ, ಟೆರಸ್ ಮೇಲಿದ್ದ ಸುಮಾರು ೧೫ ಮಂದಿ ಸಿಬ್ಬಂದಿಯನ್ನು ರಕ್ಷಿಸಿ ಹೊರಗೆ ಕರೆತಂದಿದ್ದಾರೆ. ಬಳಿಕ ಬೆಂಕಿ ಮೂರು ಮತ್ತು ನಾಲ್ಕನೇ ಮಹಡಿಗೆ ವ್ಯಾಪಿಸದಂತೆ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ. ನೆಲಮಹಡಿಯ ಜನರೇಟರ್ ಬಳಿ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ತನಿಖೆ ನಂತರವೇ ಘಟನೆಗೆ ನಿಖರ ಮಾಹಿತಿ ಲಭ್ಯವಾಗಲಿದೆ. ಈ ಸಂಬಂಧ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.