

ಬೆಂಗಳೂರು: ಬಳೆಪೇಟೆಯಲ್ಲಿರುವ ಹಾರ್ಡ್‌ವೇರ್ ಶಾಪ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಸುಮಾರು ೩೦ ಲಕ್ಷ ರೂ. ಮೌಲ್ಯದ ಪೈಂಟ್ ಬಾಕ್ಸ್ ಹಾಗೂ ಇತರೆ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ಬಳೆಪೇಟೆಯಲ್ಲಿ ಮೂರು ಅಂತಸ್ತಿನ ಕಟ್ಟಡದ ಮೊದಲ ಮಹಡಿಯಲ್ಲಿ ಕೃಷ್ಣಮೂರ್ತಿ ಎಂಬುವರು ಶ್ರೀಲಕ್ಷ್ಮೀ ನರಸಿಂಹ ಟ್ರೇಡರ್ಸ್ ಆ್ಯಂಡ್ ಹಾರ್ಡ್‌ವೇರ್‌ಶಾಪ್ ಹೊಂದಿದ್ದು, ನೆಲಮಹಡಿಯಲ್ಲಿ ಪೈಂಟ್ ಬಾಕ್ಸ್‌ಗಳನ್ನು ಇಡಲಾಗಿತ್ತು. ಶುಕ್ರವಾರ ರಾತ್ರಿ ೧೦ ಗಂಟೆ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದ್ದು, ಮೊದಲಿಗೆ ಪೇಯಿಂಟ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಕೆಲ ಕ್ಷಣಗಳಲ್ಲೇ ಇಡೀ ಕಟ್ಟಡಕ್ಕೆ ಬೆಂಕಿಯ ಕೆನ್ನಾಲಿಗೆ ಆವರಿಸಿಕೊಂಡು ದುರಂತ ಸಂಭವಿಸಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಜೆಸಿಬಿ ಬಳಸಿ ಕಟ್ಟಡದ ಶೆಟರ್ಸ್ ಮುರಿದು ಸತತ ನಾಲ್ಕು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಈ ಸಂಬಂಧ ನಗರದ ಉಪ್ಪಾರಪೇಟೆ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.