ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿ: ಕೋಟ್ಯಂತರ ರೂ. ಮೌಲ್ಯದ ಪಿಠೋಪಕರಣ ಅಗ್ನಿಗೆ ಆಹುತಿ

fire
Published on

ಬೆಂಗಳೂರು: ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಫರ್ನಿಚರ್ ಶೋ ರೂಮ್, ಕೋಚಿಂಗ್ ಸೆಂಟರ್, ಸಾಫ್ಟ್‌ವೇರ್ ಕಂಪನಿ ಕಚೇರಿ ಪಿಠೋಪಕರಣಗಳು, ದಾಖಲೆಗಳು ಸೇರಿ ಇತರೆ ವಸ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ಹೊರಮಾವು ಬಳಿಯ ಹೊರವರ್ತುಲ ರಸ್ತೆಯಲ್ಲಿ ನಡೆದಿದೆ.
ಸೋಮವಾರ ಮುಂಜಾನೆ ೨ ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.


ಶಂಕರ್ ಎಂಬುವವರಿಗೆ ಸೇರಿದ ಈ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ನೆಲಮಹಡಿ ಮತ್ತು ಒಂದನೇ ಮಹಡಿಯಲ್ಲಿ ಸ್ಲ್ಯಾನ್‌ಲೀ ಎಂಬ ಕಂಪನಿಯ ಫರ್ನಿಚರ್ ಶೋ ರೂಮ್ ಇತ್ತು. ಎರಡನೇ ಮಹಡಿಯಲ್ಲಿ ಕೋಚಿಂಗ್ ಸೆಂಟರ್ ಮೂರು ಮತ್ತು ನಾಲ್ಕನೇ ಮಹಡಿಯಲ್ಲಿ ಐಟಿ ಕಂಪನಿ ಕಚೇರಿ ಇತ್ತು. ಮುಂಜಾನೆ ೨ ಗಂಟೆ ಸುಮಾರಿಗೆ ಫರ್ನಿಚರ್ ಶೋ ರೂಮ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಕೆಲವೇ ನಿಮಿಷಗಳಲ್ಲಿ ನಾಲ್ಕು ಅಂತಸ್ತಿಗೂ ಬೆಂಕಿಯ ಜ್ವಾಲೆ ವ್ಯಾಪಿಸಿದೆ.


ಮೂರು ತಾಸು ಕಾರ್ಯಾಚರಣೆ:
ತಕ್ಷಣ ಕಟ್ಟಡದ ಸೆಕ್ಯೂರಿಟಿ ಗಾರ್ಡ್‌ಗಳು ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ವಾಹನಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ವೇಳೆ ಕಟ್ಟಡದೊಳಗೆ ಸಿಲುಕಿದ್ದ ನಾಲ್ವರು ಸೆಕ್ಯೂರಿಟಿ ಗಾರ್ಡ್‌ಗಳನ್ನು ಸುರಕ್ಷಿತವಾಗಿ ಹೊರಗೆ ಕರೆತಂದು ಪ್ರಾಣ ಉಳಿಸಿದ್ದಾರೆ. ಐದು ಅಗ್ನಿಶಾಮಕ ವಾಹನಗಳೊಂದಿಗೆ ಸಿಬ್ಬಂದಿ ಸತತ ಮೂರು ತಾಸು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.


ಸುಮಾರು ೫ ಕೋಟಿ. ರೂ. ನಷ್ಟ!
ಫರ್ನಿಚರ್ ಶೋ ರೂಮ್‌ನಲ್ಲಿ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ಇದೆ. ಈ ಬೆಂಕಿ ಅವಘಡದಲ್ಲಿ ಸುಮಾರು ೫ ಕೋಟಿ ರು. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಹೊಸಕೆರೆಹಳ್ಳಿ ಸಮೀಪದ ಬಸ್ ಗ್ಯಾರೇಜ್ ಅಗ್ನಿ ಅವಘಡ ಸಂಭವಿಸಿ ಹಲವು ಬಸ್‌ಗಳು ಅಗ್ನಿಗೆ ಆಹುತಿಯಾಗಿ ಕೋಟ್ಯಂತರ ರೂ.ನಷ್ಟವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net