

ಚಾಮರಾಜನಗರ: ಅಂಗನವಾಡಿ ಹಿಂಭಾಗದ ಜಾಗದಲ್ಲಿ ಬಿದ್ದಿದ್ದ ಒಣಗಿದ ಎಲೆ, ಕಸ ಕಡ್ಡಿ ಸುಡಲು ಹಚ್ಚಿದ ಬೆಂಕಿ ಅಂಗನವಾಡಿ ಕಟ್ಟಡಕ್ಕೂ ಹಬ್ಬಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿತ್ತು.
ಈ ಘಟನೆ ಹನೂರು ಪಟ್ಟಣದ ಪ್ರವಾಸಿ ಮಂದಿರದ ಒಳಗಿರುವ ಅಂಗನವಾಡಿಯಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ. ಕೆಂದ್ರದಲ್ಲಿ ಕೆಲಸ ಮಾಡುತ್ತಿದ್ದ ಆಯಾ ಕಟ್ಟಡದ ಹಿಂಭಾಗ ಬಿದ್ದಿದ್ದ ಕಸಕ್ಕೆ ಬೆಂಕಿ ಹಚ್ಚಿದ್ದಾರೆ. ಅದು ಪಕ್ಕದಲ್ಲೇ ಇದ್ದ ಮರದ ಪಟ್ಟಿಗೆ ಹಬ್ಬಿ ಅಂಗವನಾಡಿಯ ಕಿಟಕಿಗೆ ಬೆಂಕಿ ತಗುಲಿದೆ. ಅಂಗನವಾಡಿಯ ಒಳಗಿದ್ದ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.
ಕೇಂದ್ರದಲ್ಲಿ ಒಟ್ಟು 40 ಮಕ್ಕಳು ಓದುತ್ತಿದ್ದು, ಗುರುವಾರ ಬೆಳಗ್ಗೆ 4 ಮಕ್ಕಳು ಮಾತ್ರ ಹಾಜರಾಗಿದ್ದರು. ಕಿಟಕಿಗೆ ಬೆಂಕಿ ಹೊತ್ತಿ ಉರಿಯುವುದನ್ನು ಗಮನಿಸಿ ತಕ್ಷಣ ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗಲಾಯಿತು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.