ಕರಗ ಉತ್ಸವದಲ್ಲಿ ನೃತ್ಯ ವೇಳೆ ಮೈ ತಾಕಿದ್ದಕ್ಕೆ ಜಗಳ;ಕೊಲೆಯಲ್ಲಿ ಅಂತ್ಯ

sarathi
Published on

ಬೆಂಗಳೂರು: ಕರಗ ಉತ್ಸವವಲ್ಲಿ ನೃತ್ಯ ಮಾಡುವಾಗ ಮೈ ತಾಕಿದ ವಿಚಾರವಾಗಿ ಅಪ್ರಾಪ್ತರ ನಡುವೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಶೇಷಾದ್ರಿಪುರದ ಜೆಸಿಡಬ್ಲ್ಯು ಕಾಲನಿ ನಿವಾಸಿ ಸಾರಥಿ (17) ಮೃತ. ಈ ಸಂಬಂಧ ನಾಲ್ವರು ಬಾಲಕರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಕರಗ ನಿಮಿತ್ತ ಗಾಂಧಿನಗರದ ಅಣ್ಣಮ್ಮ ದೇವಾಲಯದ ಬಳಿ ಬುಧವಾರ ನಸುಕಿನಲ್ಲಿ ಅಪ್ರಾಪ್ತರು ಕುಣಿದಾಡುವ ವೇಳೆ ಕೃತ್ಯ ನಡೆದಿದೆ.

ಪಾಲಕರ ಜತೆ ನೆಲೆಸಿದ್ದ ಸಾರಥಿ, ಕೂಲಿ ಕೆಲಸ ಮಾಡಿಕೊಂಡಿದ್ದ. ಕರಗ ನೋಡಲು ಅಣ್ಣಮ್ಮ ದೇವಾಲಯ ಬಳಿ ನಸುಕಿನ 3.30ರಲ್ಲಿ ಹುಡುಗರ ಜತೆ ಸಹ ಕುಣಿಯಲು ಶುರು ಮಾಡಿದ್ದ. ಪಕ್ಕದಲ್ಲಿದ್ದ ಹುಡುಗರಿಗೆ ಮೈ ತಾಕಿದ ವಿಚಾರವಾಗಿ ಜಗಳವಾಗಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.

ಕೆರಳಿದ ಅಪ್ರಾಪ್ತ ಬಾಲಕರು ಹೂ ಕತ್ತರಿಸುವ ಕತ್ತರಿಯಿಂದ ಸಾರಥಿ ಎದೆಗೆ ಎರಡು ಬಾರಿ ಇರಿದಿದ್ದರು. ತೀವ್ರವಾಗಿ ಗಾಯಗೊಂಡು ಸಾರಥಿ ಮೃತಪಟ್ಟಿದ್ದಾನೆ. ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net