ಮೊಬೈಲ್ ವಿಚಾರಕ್ಕೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ

Crime Logo
Published on

ಬೆಂಗಳೂರು: ಇಬ್ಬರು ಸ್ನೇಹಿತರ ನಡುವೆ ಮೊಬೈಲ್ ವಿಚಾರಕ್ಕೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಮೈಸೂರು ಜಿಲ್ಲೆ ಟಿ.ನರಸೀಪುರ ಮೂಲದ ಶ್ರೀನಿವಾಸ(೪೫) ಕೊಲೆಯಾದವರು.

ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಈ ಸಂಬಂಧ ಆರೋಪಿ ನಾಗರಾಜ್ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀನಿವಾಸ ಮತ್ತು ನಾಗರಾಜ್ ಟಿ.ನರಸೀಪುರ ತಾಲೂಕಿನ ತಾಯೂರು ಗ್ರಾಮದವರು. ನಗರದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದರು. ಕತ್ರಿಗುಪ್ಪೆಯ ಶ್ರೀನಿವಾಸನಗರದಲ್ಲಿ ಬಾಡಿಗೆ ರೂಮ್‌ನಲ್ಲಿ ನೆಲೆಸಿದ್ದರು. ಇಬ್ಬರು ಸಂಜೆ ಕೆಲಸ ಮುಗಿಸಿಕೊಂಡು ರೂಮ್‌ಗೆ ಬಂದಿದ್ದಾರೆ. ಈ ವೇಳೆ ನಾಗರಾಜ್‌ನ ಮೊಬೈಲ್ ಅನ್ನು ಶ್ರೀನಿವಾಸ ತೆಗೆದುಕೊಂಡ ಎಂಬ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ನಾಗರಾಜ್ ಮನೆಯಲ್ಲಿದ್ದ ವಾಟರ್ ಹೀಟರ್‌ನಿಂದ ಶ್ರಿನಿವಾಸ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಗುರುವಾರ ಬೆಳಗ್ಗೆ ಇಬ್ಬರು ಕೆಲಸಕ್ಕೆ ಬಾರದ ಹಿನ್ನೆಲೆಯಲ್ಲಿ ಮೇಸ್ತ್ರಿ ರೂಮ್ ಬಳಿ ಹುಡುಕಿಕೊಂಡು ಬಂದಾಗ ಶ್ರೀನಿವಾಸ್‌ನ ಕೊಲೆಯಾಗಿರುವುದು ಕಂಡು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಬಳಿಕ ಮೃತನ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.

ಮೈಸೂರಿನಲ್ಲಿ ಆರೋಪಿ ಸೆರೆ:

ಕೊಲೆ ಬಳಿಕ ಪರಾರಿಯಾಗಿದ್ದ ಆರೋಪಿ ನಾಗರಾಜ್‌ನನ್ನು ಕಾರ್ಯಾಚರಣೆ ನಡೆಸಿ ಮೈಸೂರಿನಲ್ಲಿ ಬಂಧಿಸಿಲಾಗಿದೆ. ಮೊಬೈಲ್ ವಿಚಾರಕ್ಕೆ ನಡೆದ ಜಗಳದ ವೇಳೆ ಶ್ರೀನಿವಾಸ್‌ನನ್ನು ಕೊಲೆ ಮಾಡಿದ್ದಾಗಿ ಆರೋಪಿ ನಾಗರಾಜ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಈ ಸಂಬಂಧ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net