ಗುರಾಯಿಸಿದ ವಿಚಾರಕ್ಕೆ ಜಗಳ: ಆಟೋ ಚಾಲಕನ ಕೊಲೆಗೆ ಯತ್ನ

Crime Logo
Published on

ಬೆಂಗಳೂರು: ಗುರಾಯಿಸಿದಕ್ಕೆ ಆಟೋ ಚಾಲಕನಿಗೆ ಬಿಯರ್ ಬಾಟಲಿ ಮತ್ತು ಚಾಕುವಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಲಾಗಿದೆ.

ನಾಗಸಂದ್ರದ ತಿಪ್ಪೇನಹಳ್ಳಿ ನಿವಾಸಿ ಶಶಿಕುಮಾರ್(೩೨) ಹಲ್ಲೆಗೊಳಗಾದವರು. ಕೃತ್ಯ ಎಸಗಿದ ಶಿವು ಅಲಿಯಾಸ್ ಜನರೇಟರ್(೨೬) ಎಂಬಾತನ ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಭರತ್ ಸೇರಿ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಶಿಕುಮಾರ್ ನಗರದಲ್ಲಿ ಆಟೋ ಚಾಲಕರಾಗಿದ್ದು, ಅವರ ಪತ್ನಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಗುತ್ತಿಗೆ ಆಧಾರದಲ್ಲಿ ಟೆಲಿಕಾಲರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಮಕ್ಕಳ ಜತೆ ತಿಪ್ಪೇನಹಳ್ಳಿಯಲ್ಲಿ ವಾಸವಾಗಿದ್ದಾರೆ. ಸೆ.೨೧ರಂದು ರಾತ್ರಿ ಸಂಬಂಧಿ ನೆಲಗೆದರನಹಳ್ಳಿಯಲ್ಲಿರುವ ಮೂರ್ತಿ ಎಂಬುವರ ಮನೆಗೆ ಪಿತೃಪಕ್ಷದ ಊಟಕ್ಕೆಂದು ಬೈಕ್‌ನಲ್ಲಿ ಹೋಗುವಾಗ, ಮಾರ್ಗ ಮಧ್ಯೆ ಶಿವಪುರದ ವೈನ್ಸ್ ಸ್ಟೋರ್‌ನಲ್ಲಿ ಮದ್ಯ ಸೇವಿಸಲು ಹೋಗಿದ್ದಾರೆ. ಅದೇ ವೈನ್ಸ್ ಸ್ಟೋರ್‌ನಲ್ಲಿ ಆರೋಪಿಗಳ ಭರತ್, ಶಿವು ಹಾಗೂ ಮತ್ತೊಬ್ಬ ಆರೋಪಿ ಮದ್ಯ ಸೇವಿಸುತ್ತಿದ್ದರು.

ಆಗ ಶಶಿಕುಮಾರ್, ಭರತ್ ಕಡೆ ಒಮ್ಮೆ ನೋಡಿದ್ದಾರೆ. ಅಷ್ಟಕ್ಕೆ ಕೋಪಗೊಂಡ ಆರೋಪಿ ಭರತ್, ಯಾಕೆ ನಮ್ಮನ್ನೆ ಗುರಾಯಿಸುತ್ತಿದ್ದಿಯಾ ಎಂದು ಪ್ರಶ್ನಸಿ ಜಗಳ ತೆಗೆದಿದ್ದಾರೆ. ಬಳಿಕ ಸ್ಥಳೀಯರು ಜಗಳ ಬಿಡಿಸಿದ್ದಾರೆ. ನಂತರ ವೈನ್ಸ್ ಸ್ಟೋರ್‌ನಿಂದ ಹೊರಡಲು ಮುಂದಾಗಿದ್ದ ಶಶಿಕುಮಾರ್‌ಗೆ ಬಿಯರ್ ಬಾಯಟಲಿಯಿಂದ ಭರತ್ ತಲೆಗೆ ಹೊಡೆದಿದ್ದಾನೆ. ಬಳಿಕ ಮತ್ತೊಬ್ಬ ಆರೋಪಿ ಶಿವು, ಶಶಿಕುಮಾರ್ ಕುತ್ತಿಗೆಗೆ ಚಾಕುವಿನಿಂದ ಚುಚ್ಚಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಶಶಿಕುಮಾರ್ ಕುಸಿದು ಬಿದ್ದಿದ್ದಾರೆ. ಗೊರಗುಂಟೆಪಾಳ್ಯದಲ್ಲಿರುವ ಇಎಸ್‌ಐ ಆಸ್ಪತ್ರೆಗೆ ಶಶಿಕುಮಾರ್‌ನನ್ನು ದಾಖಲಿಸಿದ್ದಾರೆ. ಸದ್ಯ ಶಶಿಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದು, ಈ ಸಂಬಂಧ ಶಶಿಕುಮಾರ್ ಪತ್ನಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಲಾಗಿದೆ. ಇತರೆ ಇಬ್ಬರು ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ. ಶಿವಕುಮಾರ್ ಜನರೇಟರ್ ಕೆಲಸ ಮಾಡಿಕೊಂಡಿದ್ದ. ಭರತ್ ಖಾಸಗಿ ಕಂಪನಿಯಲ್ಲಿ ಪ್ಯಾಕಿಂಗ್ ಕೆಲಸ ಮಾಡಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಪೀಣ್ಯ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net