

ಬೆಂಗಳೂರು: ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಮಾತಿನ ಸಮರವೇ ನಡೆದು ಹೋಗಿದೆ.
ಸರ್ಕಾರ ಬೀಳಿಸಲು ಮಹಾ ನಾಯಕರೊಬ್ಬರು ಒಂದು ಸಾವಿರ ಕೋಟಿ ಸಿದ್ಧಪಡಿಸಿಕೊಂಡಿದ್ದಾರೆಂಬ ಯತ್ನಾಳ್ ಹೇಳಿಕೆ ಇಟ್ಟುಕೊಂಡು ಕಾಂಗ್ರೆಸ್ ಬಿಜೆಪಿ ಮೇಲೆ ಮುಗಿಬಿದ್ದಿತ್ತು. ಪೊಲೀಸರಿಗೆ ದೂರನ್ನೂ ಸಹ ನೀಡಿತು. ಇಷ್ಟರ ನಡುವೆ ಯತ್ನಾಳ್ ಸ್ಪಷ್ಟನೆ ನೀಡಿದರು. ಆದರೆ, ಚರ್ಚೆ ಮಾತ್ರ ನಿಂತಿಲ್ಲ.
ಪ್ರಿಯಾಂಕ್ ಹೇಳಿದ್ದು:
ಬಿಜೆಪಿಯ ಸಾವಿರ ಕೋಟಿ ಸರದಾರರು, ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವ ಕಾರ್ಯಾಚರಣೆಗೆ 1000 ಕೋಟಿ ಮೀಸಲಿಟ್ಟಿದ್ದಾರೆ ಎಂಬ ಬಿಜೆಪಿ ಶಾಸಕರ ಹೇಳಿಕೆ ಅತ್ಯಂತ ಗಂಭೀರವಾದುದು. ದೇಶದಲ್ಲಿ ಬಿಜೆಪಿಯೇತರ ಸರ್ಕಾರಗಳು ಅಸ್ಥಿತ್ವದಲ್ಲಿ ಇರಲೇಬಾರದು ಎನ್ನುವುದು ಮೋದಿ-ಶಾ ಜೋಡಿಯ ಪ್ರಮುಖ ಆಸೆ. ಆ ಆಸೆಗೆ ನೀರುಣಿಸಿ ಪೋಷಿಸುವುದು ರಾಜ್ಯದ ಭ್ರಷ್ಟರು ಎಂದು ಸಚಿವ ಪ್ರಿಯಾಂಕ್ ಆರೋಪಿಸಿದ್ದರು.
ಯತ್ನಾಳ್ ಹೇಳಿದ್ದು:
ಸಚಿವರ ಹೇಳಿಕೆಗೆ ತಿರುಗೇಟು ನೀಡಿದ ಯತ್ನಾಳ್, ಪ್ರಿಯಾಂಕ್, ನಿಮ್ಮ ್ಯಾಕ್ಟ್ ಚಕ್ ಏಜೆನ್ಸಿಗಳಿಗೆ ಸ್ವಲ್ಪ ಕೆಲಸ ಕೊಡಿ, ಸುಮ್ಮನೆ ಸರ್ಕಾರದ ರೊಕ್ಕ ನೀಡೋದಕ್ಕಿಂತ ನಿಮ್ಮ ಟ್ವಿಟ್ಟರ್ ಖಾತೆಯನ್ನಾದರೂ ನಿಭಾಯಿಸಲಿ ಎಂದು ಲೇವಡಿ ಮಾಡಿದ್ದಾರೆ.
ನಾನು ಹೇಳಿರುವುದು ನಿಮ್ಮ ಸರ್ಕಾರದಲ್ಲೇ ಮಂತ್ರಿಗಳಿರುವ ಹಲವರು ಹಣ ಇಟ್ಟುಕೊಂಡು ಸಿದ್ದರಾಮಯ್ಯನವರನ್ನು ಇಳಿಸಿ ಸರ್ಕಾರವನ್ನು ಕೆಡವಲು ಪ್ರಯತ್ನಿಸುತ್ತಿದ್ದಾರೆ ಎಂದು. ಗಾಜಿನ ಮನೆಯಿಂದ ಹೊರಬಂದು ನಿಮ್ಮ ಸರ್ಕಾರದ ಸ್ಥಿತಿಯನ್ನು ನೋಡಿ ಎಂದು ಯತ್ನಾಳ್ ಕೆಣಕಿದ್ದರು.
ಪ್ರಿಯಾಂಕ್ ತಿರುಗೇಟು:
ಕಾಂಗ್ರೆಸ್ ಒಡೆದು ನಾನು ಮುಖ್ಯಮಂತ್ರಿಯಾಗಬೇಕು ಎಂದು ಸಾವಿರ ಕೋಟಿ ರಿಸರ್ವ್ ಮಾಡಿಟ್ಟಿದ್ದಾರೆ, ಆದರೆ ಕಾಂಗ್ರೆಸ್ ಒಡೆದು ತಗೋಳೋಕೆ ನಮ್ಮ ಯಾರದ್ದೂ ಒಪ್ಪಿಗೆ ಇಲ್ಲ
ಹೀಗೆ ಹೇಳಿದ್ದು ನೀವೇ ಅಲ್ಲವೇ? ಕಾಂಗ್ರೆಸ್ ಒಡೆದು ಮುಖ್ಯಮಂತ್ರಿಯಾಗಲು ತಯಾರಿರುವವರು ನಿಮ್ಮವರಲ್ಲವೇ?ನಿಮ್ಮವರಲ್ಲದಿದ್ದರೆ ನಿಮ್ಮ ಒಪ್ಪಿಗೆ ಕೇಳುವವರು ಇನ್ಯಾರಿದ್ದಾರೆ ಸ್ವಾಮಿ ಎಂದು ಪ್ರಿಯಾಂಕ್ ವ್ಯಂಗ್ಯವಾಡಿದ್ದಾರೆ.