ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಬಿರುಸಿನ ಚುನಾವಣೆ

HUN-FEB-19-1(KASABA ELECTION)
ಹುಣಸೂರು ಕಸಬಾ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಶಾಸಕ ಜಿ.ಡಿ.ಹರೀಶ್‌ಗೌಡ ಮತಯಾಚಿಸಿದರು. ಮುಖಂಡರಾದ ಚಂದ್ರಶೇಖರ್, ಬಸವಲಿಂಗಯ್ಯ ಇತರರಿದ್ದರು.
Published on

ಹುಣಸೂರು: ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಆಯ್ಕೆ ಸಂಬಂಧ ಮಂಗಳವಾರ ನಡೆದ ಚುನಾವಣೆಯಲ್ಲಿ ಶೇ.88ರಷ್ಟು ಮತದಾನವಾಗಿದೆ.

ಬೆಳಗ್ಗೆ 9 ಗಂಟೆಗೆ ಆರಂಭವಾದ ಮತದಾನ ಮಧ್ಯಾಹ್ನ ಬಿಸಿಲಿನಲ್ಲೂ ಮತದಾರರು ಮತಗಟ್ಟೆಗೆ ಬಂದು ಹಕ್ಕು ಚಲಾಯಿಸುವಲ್ಲಿ ನಿರತರಾಗಿದ್ದರು. ಶಾಸಕ ಜಿ.ಡಿ.ಹರೀಶ್‌ಗೌಡ ಮತ್ತು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಇಬ್ಬರೂ ಮತಗಟ್ಟೆ ಬಳಿ ದಿನವಿಡೀ ಇದ್ದು ಮತಯಾಚಿಸಿದರು. ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಸಾಲಗಾರರಲ್ಲದ ಕ್ಷೇತ್ರದಲ್ಲಿ ಒಟ್ಟು 589 ಮತದಾರರಿದ್ದು, ಈ ಪೈಕಿ 483 ಮತದಾರರು ಮತ ಚಲಾಯಿಸುವ ಮೂಲಕ ಶೇ.82 ರಷ್ಟು ಮತದಾನ ನಡೆದಿದೆ ಎಂದು ಚುನಾವಣಾಕಾರಿ ರಾಜು ತಿಳಿಸಿದರು.

ಕೆಲಹೊತ್ತು ಘರ್ಷಣೆ: ಮತಗಟ್ಟೆ ಬಳಿ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಪೊಲೀಸರು ಮಧ್ಯೆ ಪ್ರವೇಶಿಸಿ ಎರಡೂ ಗುಂಪಿನವರನ್ನು ಮತಗಟ್ಟೆ ಬಳಿಯಿಂದ ದೂರ ಕಳುಹಿಸಿ ಶಾಂತ ವಾತಾವರಣ ಸೃಷ್ಟಿಸುವಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ್ ಕ್ರಮವಹಿಸಿದರು.

ಮತ ಎಣಿಕೆ: ಚುನಾವಣೆ ಸಂಬಂಧ ಕಾಂಗ್ರೆಸ್ ಬೆಂಬಲಿತ ಸದಸ್ಯರು ಸದಸ್ಯತ್ವ ವಜಾ ಗೊಳಿಸಿರುವ ಬಗ್ಗೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಸಂಬಂಧ ನ್ಯಾಯಾಲಯ ಸೂಕ್ತ ದಾಖಲೆ ಹೊಂದಿರುವ ಷೇರುದಾರರಿಗೆ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿತ್ತು. ಮತ ಎಣಿಕೆ ಪ್ರಕ್ರಿಯೆಗೆ ಅಂತಿಮ ತೀರ್ಪು ಹೊರ ಬರುವವರಗೆ ಮತ ಎಣಿಕೆ ತಾತ್ಕಾಲಿಕ ತಡೆ ಹಿಡಿಯುವಂತೆ ಸೂಚಿಸಿದ ಆಧಾರದ ಮೇಲೆ ಮತ ಎಣಿಕೆ ಮುಂದೂಡಿದ್ದೇವೆ. ಮತಪೆಟ್ಟಿಗೆಯನ್ನು ಪೊಲೀಸ್ ರಕ್ಷಣೆಯೊಂದಿಗೆ ಹುಣಸೂರು ತಾಲೂಕು ಖಜಾನೆಯಲ್ಲಿ ಸೂಕ್ತ ಬಂದೋಬಸ್ತಿನಲ್ಲಿ ರಕ್ಷಿಸಿಡಲಾಗಿದ್ದು, ನ್ಯಾಯಾಲಯದಿಂದ ತೀರ್ಪು ಹೊರ ಬಂದ ಬಳಿಕ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಚುನಾವಣಾಕಾರಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net