ಸಾವಯವದಲ್ಲಿ ಖುಷಿ ಕಂಡ ಕೃಷಿಕ

skp farmer
ಸಾವಯವ ಕೃಷಿಯ ತೋಟದಲ್ಲಿ ಕೃಷಿ ಅಧಿಕಾರಿಗಳೊಂದಿಗೆ ಶಿವಕುಮಾರ್.
Published on

ಶಿಕಾರಿಪುರ: ಇತ್ತೀಚೆಗೆ ಬಹುತೇಕ ರೈತರು ಅತಿ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಅವಲಂಬಿಸಿದ್ದಾರೆ. ಇದರಿಂದ ಮಣ್ಣಿನಲ್ಲಿರುವ ಸತ್ವ ನಾಶವಾಗುತ್ತಿದೆ. ನಮಗರಿವಿಲ್ಲದಂತೆ ನಮ್ಮ ನೆಲ, ಜಲ, ಪರಿಸರ ವಿಷವಾಗುತ್ತಿದೆ. ಇದರ ನಡುವೆ ಕೆಲ ರೈತರು ಸಾವಯವ ಕೃಷಿಯ ಮಹತ್ವ ಅರಿತು ಅಳವಡಿಸಿಕೊಂಡು ಯಶಸ್ವಿಯಾಗಿದ್ದಾರೆ. ಇದರಲ್ಲಿ ತಾಲೂಕಿನ ಹುಣಸೇಕೊಪ್ಪದ ಶಿವಕುಮಾರ್ ಕೂಡ ಒಬ್ಬರು.

ಇವರು ಮಣ್ಣಿನ ಮೂಲ ಸತ್ವವನ್ನು ಉಳಿಸಿಕೊಂಡು ಸಾಂಪ್ರದಾಯಿಕ ಕೃಷಿ ಮಾಡುತ್ತಿದ್ದಾರೆ. ನಾಲ್ಕು ಎಕರೆ ಹೊಲದಲ್ಲಿ ಅಡಕೆ, ಮೆಣಸು, ಏಲಕ್ಕಿ, ಭತ್ತ, ಮೆಕ್ಕೆಜೋಳ, ತರಕಾರಿ ಬೆಳೆಗಳನ್ನು ಸಾವಯವ ಗೊಬ್ಬರದಲ್ಲಿ ಕಳೆದ ಆರು ವರ್ಷಗಳಿಂದ ಬೆಳೆಯುತ್ತಿದ್ದಾರೆ. ಇವರ ಸಾವಯವ ಸಮಗ್ರ ಕೃಷಿಯನ್ನು ಗಮನಿಸಿ ತಾಲೂಕು ಸಮಗ್ರ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಬರುವ ವಿಡಿಯೋಗಳನ್ನು ಗಮನಿಸುತ್ತಿದ್ದರು. ಸಾಂಪ್ರದಾಯಿಕ ಪದ್ಧತಿಯಲ್ಲಿ, ಕೇವಲ ಸಾವಯವ ಗೊಬ್ಬರವನ್ನೇ ಬಳಸಿ ಕೃಷಿ ಮಾಡಿ ಯಶಸ್ಸು ಕಂಡವರ ಯಶೋಗಾಥೆಗಳು ಇವರಿಗೆ ಉತ್ತೇಜನ ನೀಡಿದ್ದವು. ಈಗ ಸಮಗ್ರ ಕೃಷಿ ಪದ್ಧತಿ ಹಾದಿಯಲ್ಲಿ ಶಿವಕುಮಾರ್ ಕೂಡ ಮುಂದುವರಿದಿದ್ದಾರೆ.

ಎರೆಹುಳು, ಕೋಳಿ ಗೊಬ್ಬರ, ಮೀನು ಹಿಂಡಿ, ಬೇವಿನ ಹಿಂಡಿ, ಗೋಮೂತ್ರ, ಸೂಕ್ಷ್ಮಜೀವಿಗಳ ಗೊಬ್ಬರವನ್ನು ತಯಾರಿಸುತ್ತಾರೆ. ದಶಕಗಳ ಹಿಂದೆ ಇರುವಂತೆಯೇ ನಮ್ಮ ಮಣ್ಣು ಫಲವತ್ತಾಗಿರಬೇಕು. ರಾಸಾಯನಿಕಗಳು ಮಿಶ್ರಣ ಆಗಬಾರದು ಎಂಬುದು ಇವರ ಉದ್ದೇಶ. ಇವರು ಸಾವಯವ ಕೃಷಿ ಆರಂಭಿಸಿದ ಒಂದೆರಡು ವರ್ಷ ನಿರೀಕ್ಷಿತ ಇಳುವರಿ ಸಿಗಲಿಲ್ಲ. ಇದಕ್ಕೆ ಧೃತಿಗೆಡದೆ ಸಾವಯವ ಪ್ರಯೋಗವನ್ನೇ ಮುಂದುವರಿಸಿದರು. ಈಗ ಸಾಕಷ್ಟು ಫಲ, ಯಶಸ್ಸನ್ನೂ ತಂದುಕೊಟ್ಟಿದೆ. ಅಡಕೆ ತೋಟದಲ್ಲಿ ಉಪಬೆಳೆಯಾಗಿ ಏಲಕ್ಕಿ, ಕಾಳುಮೆಣಸು, ಜಾಯಿಕಾಯಿ ಜತೆಗೆ ತರಕಾರಿ ಬೆಳೆಯುತ್ತಾರೆ.

ಮನೆಯಲ್ಲೇ ಕ್ರಿಮಿನಾಶಕ ತಯಾರಿ: ಜಮೀನಿನ ಸುತ್ತ ಸೊಪ್ಪಿನ ಗಿಡಗಳನ್ನು ನೆಟ್ಟಿರುವ ಇವರು ಜಮೀನಿಗೆ ಕೆರೆ ಮತ್ತು ಕಾಡಿನ ಮಣ್ಣು ಹಾಕಿಸಬೇಕು. ಆದರೆ ನಾವು ಅನಗತ್ಯವಾಗಿ ರಾಸಾಯನಿಕ ಬಳಕೆಯಿಂದ ಅದನ್ನು ಸತ್ವರಹಿತವಾಗಿ ಮಾಡಿದ್ದೇವೆ. ಸ್ಥಳೀಯವಾಗಿ ಸಿಗುವ ಪದಾರ್ಥಗಳನ್ನು ಬಳಸಿಕೊಂಡು ಮಣ್ಣಿನ ಸತ್ವ ಉಳಿಸಬೇಕು ಪ್ರಗತಿಪರ ಕೃಷಿಕ ಶಿವಕುಮಾರ್ ಅವರ ಅಭಿಪ್ರಾಯ. ಸಾವಯವ ಗೊಬ್ಬರ ಮತ್ತು ರಾಸಾಯನಿಕ ರಹಿತ ಕ್ರಿಮಿನಾಶಕಗಳನ್ನು ತಯಾರಿಸಲು ಸಿಮೆಂಟ್ ತೊಟ್ಟಿಗಳನ್ನು ಮಾಡಿಕೊಂಡಿದ್ದಾರೆ. ಕ್ರಿಮಿನಾಶಕ ತಯಾರಿಸಲು ಮಜ್ಜಿಗೆ, ತಾಮ್ರ, ಸುಣ್ಣ , ಮೀನಿನೆಣ್ಣೆ, ಗವ್ಯಾಮೃತ ಬೆರಸುತ್ತಾರೆ. ಮಜ್ಜಿಗೆಯನ್ನು ತಾಮ್ರದ ಜತೆಗೆ ಆರು ತಿಂಗಳವರೆಗೆ ನೆನೆಸುತ್ತಾರೆ. ಇದು ರಾಸಾಯನಿಕಗಳಿಗಿಂತ ಅದ್ಭುತವಾಗಿ ಕೆಲಸ ಮಾಡುತ್ತದೆ ಎನ್ನುತ್ತಾರೆ. ಇವರ ಕೃಷಿ ಪದ್ಧತಿ ನೋಡಿ ತಿಳಿದುಕೊಳ್ಳಲು ಸುತ್ತಮುತ್ತಲಿನ ರೈತರು ಆಗಮಿಸುತ್ತಾರೆ.

ನಮ್ಮ ಮಣ್ಣನ್ನು ರಾಸಾಯನಿಕಗಳಿಂದ ಮುಕ್ತಗೊಳಿಸಿ ಸತ್ವಯುತ ಮಣ್ಣನ್ನು ಉಳಿಸಬೇಕು. ಇದಕ್ಕೆ ಪೂರಕವಾಗಿ ಹಂತ ಹಂತವಾಗಿ ಪ್ರಗತಿಪರ ಕೃಷಿಕರೂ ಸೇರಿ, ಸಾಮಾಜಿಕ ಜಾಲತಾಣದಲ್ಲಿ ಬರುವ ವಿಡಿಯೋ ಗಮನಿಸಿ ಅದೇ ಪದ್ಧತಿ ಅನುಸರಿಸಿ ಕೃಷಿ ಆರಂಭಿಸಿದೆ. ಮೊದಲು ಫಸಲು ಸಿಗಲಿಲ್ಲ. ನಂತರದ ವರ್ಷಗಳಲ್ಲಿ ಇಳುವರಿ ಬರುತ್ತಿದೆ ಎನ್ನುತ್ತಾರೆ ಸಾವಯವ ಕೃಷಿಕ ಶಿವಕುಮಾರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net