

ಬೆಂಗಳೂರು: ಪೊಲೀಸ್ ಹೆಲ್ಪ್‌ಲೈನ್ ಹೆಸರಿನಲ್ಲಿ ಸುಳ್ಳು ನಂಬರ್ ಉಲ್ಲೇಖಿಸಿ ಎಸ್‌ಎಂಎಸ್‌ನ್ನು ಕಿಡಿಗೇಡಿಗಳು ಎಲ್ಲೆಡೆ ವೈರಲ್ ಮಾಡುತ್ತಿದ್ದು, ಎಚ್ಚರದಿಂದ ಇರುವಂತೆ ಪೊಲೀಸರು ಸೂಚಿಸಿದ್ದಾರೆ.
ರಾತ್ರಿ ವೇಳೆ ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನೇ ದುರ್ಬಳಕ್ಕೆ ಮಾಡಿಕೊಂಡ ಕಿಡಿಗೇಡಿಗಳು ಪೊಲೀಸ್ ಹೆಲ್ಪ್‌ಲೈನ್ ಹೆಸರಿನಲ್ಲಿ ಸಾರ್ವಜನಿಕರನ್ನು ದಾರಿ ತಪ್ಪಿಸಲು ಮತ್ತು ವಂಚನೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ.
ನಕಲಿ ಎಸ್‌ಎಂಎಸ್‌ನಲ್ಲಿ ‘‘ಪೊಲೀಸರು ಉಚಿತ ಸಂಚಾರ ವ್ಯವಸ್ಥೆ ಜಾರಿಗೆ ತಂದಿದ್ದಾರೆ. ರಾತ್ರಿ 10 ರಿಂದ ಬೆಳಗಿನ ಜಾವ 6 ಗಂಟೆ ವರೆಗೂ ಮಹಿಳೆ ಮತ್ತು ಮಕ್ಕಳು ಬಳಸಬಹುದು. ನೀವು ಇರುವ ಜಾಗದಿಂದ ಪೊಲೀಸ್ ಹೆಲ್ಪ್‌ಲೈನ್ 1091 ಅಥವಾ 78370 18555 ಕ್ಕೆ ಕರೆ ಮಾಡಬಹುದು. ಇದಕ್ಕಾಗಿ ದಿನದ 24*7 ಸೇವೆ ಸಲ್ಲಿಸುವ ಕಂಟ್ರೋಲ್ ರೂಮ್ ತೆರೆಯಲಾಗಿದೆ. ಕರೆ ಮಾಡಿದ ತಕ್ಷಣ ತುರ್ತು ಸೇವಾ ವಾಹನ ಬಂದು ನಿಮ್ಮನ್ನು ಪಿಕ್ ಮಾಡಿ ಮನೆಗೆ ತಲುಪಿಸುತ್ತದೆ. ಈ ನಂಬರ್‌ನ್ನು ಪತ್ನಿ, ಹೆಣ್ಣು ಮಕ್ಕಳು, ಸಹೋದರಿಯರು ಮತ್ತು ಸ್ನೇಹಿತರಿಗೆ, ಮಹಿಳೆಯರಿಗೆ ರವಾನೆ ಮಾಡಿ. ತುರ್ತು ಸಂದರ್ಭದಲ್ಲಿ ಈ ನಂಬರ್‌ಗೆ ಮಿಸ್ ಕಾಲ್ ಅಥವಾ ಬ್ಲಾಂಕ್ ಎಸ್‌ಎಂಎಸ್ ಕಳುಹಿಸಿ’ ಎಂದು ಸುಳ್ಳು ಸಂದೇಶವನ್ನು ಎಲ್ಲೆಡೆ ವೈರಲ್ ಮಾಡುತ್ತಿದ್ದಾರೆ.
ಇಂತಹ ಯಾವುದೇ ಯೋಜನೆಯನ್ನು ಪೊಲೀಸ್ ಇಲಾಖೆ ಜಾರಿಗೆ ತಂದಿಲ್ಲ. ಈ ಹೆಲ್ಪ್‌ಲೈನ್ ನಂಬರ್ ಸಹ ಇಲಾಖೆಗೆ ಸೇರಿದ್ದಲ್ಲ. ವಂಚನೆ ಮಾಡುವ ಉದ್ದೇಶಕ್ಕೆ ಕಿಡಿಗೇಡಿಗಳು ಈ ಸುಳ್ಳು ಸಂದೇಶವನ್ನು ಎಲ್ಲೆಡೆ ವೈರಲ್ ಮಾಡುತ್ತಿದ್ದಾರೆ ಎಚ್ಚರದಿಂದ ಇರುವಂತೆ ಪೊಲೀಸರು ಸೂಚಿಸಿದ್ದಾರೆ. ತುರ್ತು ಸೇವೆ ನಮ್ಮ 112ಗೆ ಕರೆ ಮಾಡುವಂತೆ ಪೊಲೀಸರು ಸಲಹೆ ನೀಡಿದ್ದಾರೆ.