ಪಂಚತಾರ ಹೋಟೆಲ್‌ಗೆ ಹುಸಿ ಬಾಂಬ್ ಬೆದರಿಕೆ

bomb1
Published on

ಬೆಂಗಳೂರು: ರಾಜಧಾನಿಯ ಖಾಸಗಿ ಶಾಲೆ, ಆಸ್ಪತ್ರೆಗೆ ಹುಸಿ ಬಾಂಬ್ ಸಂದೇಶ ಕಳುಹಿಸುತ್ತಿದ್ದ ಕಿಡಿಗೇಡಿಗಳು ಇದೀಗ ಪ್ರತಿಷ್ಠಿತ ಹೋಟೆಲ್‌ಗಳಿಗೂ ಇಮೇಲ್ ಕಳುಹಿಸಿ ಬೆದರಿಕೆ ಒಡ್ಡಿದ್ದು, ಕೆಲಕಾಲ ಆತಂಕ ಆವರಿಸಿತ್ತು.

ಎಲೆಕ್ಟ್ರಾನಿಕ್ ಸಿಟಿಯ ಹೋಟೆಲ್ ಒಟ್ಟೇರಾ, ಹೋಟೆಲ್ ಓಬೆರಾಯ್ ಮತ್ತು ಹೋಟೆಲ್ ಐಎಚ್‌ಸಿಎಲ್ ಟಾಟಾಗೆ ಬುಧವಾರ ತಡರಾತ್ರಿ 2.34ರಲ್ಲಿ ಬೆದರಿಕೆ ಇಮೇಲ್ ಬಂದಿವೆ.ನನ್ನ ತಂದೆ ಡಿಜಿಪಿ ಶಂಕರ್ ಜಿವ್ವಾಲ್, ಇವರು ಪಾಕಿಸ್ತಾನದ ಐಸಿಸ್ ಸಂಘಟನೆಗೆ ಜತೆಗೆ ಸಂಪರ್ಕ ಹೊಂದಿದ್ದಾರೆ. ಡ್ರಗ್ಸ್ ಕೇಸಿನಲ್ಲಿ ಸಿಲುಕಿರುವ ಡಿಎಂಕೆ ಕುಟುಂಬದ ವಿಷಯ ಬೇರೆಡೆ ಸೆಳೆಯುವ ಉದ್ದೇಶಕ್ಕೆ ಬಿಡಿಎಸ್‌ಎಸ್ ಬ್ಯಾಂಕ್‌ಗಳನ್ನು ಸ್ಫೋಟಿಸಲು ಸಂಚುರೂಪಿಸಲಾಗಿದೆ.

ಈ ಬ್ಯಾಂಕಿನ ಕೆಲ ಅಧಿಕಾರಿಗಳು ನಮ್ಮ ತಂದೆಯ ಜತೆಗೆ ಕೈಜೋಡಿಸಿದ್ದಾರೆ. ಆದರೆ, ನಮ್ಮ ಕುಟುಂಬದ ಕೈಯಿಂದ ರಕ್ತಪಾತ ಮಾಡಿಸುವುದು ನನಗೆ ಇಷ್ಟ ಇಲ್ಲವೆಂದು ಅಪರಿಚಿತ ವ್ಯಕ್ತಿ ಇಮೇಲ್‌ನಲ್ಲಿ ಉಲ್ಲೇಖಿಸಿದ್ದಾನೆ. ಇದನ್ನು ಗಮನಿಸಿದ ಹೋಟೆಲ್ ಅಧಿಕಾರಿಗಳು, ಪೊಲೀಸ್ ಕಂಟ್ರೋಲ್ ರೂಮ್‌ಗೆ ರವಾನಿಸಿದ್ದರು.ಸ್ಥಳೀಯ ಪೊಲೀಸರು ಮತ್ತು ಶ್ವಾಸ ದಳ, ಬಾಂಬ್ ಪತ್ತೆ ದಳ ಸ್ಥಳಕ್ಕೆ ಹೋಟೆಲ್‌ಗಳಿಗೆ ಭೇಟಿ ಕೊಟ್ಟು ಎಲ್ಲೆಡೆ ಪರಿಶೀಲನೆ ನಡೆಸಿ ಯಾವುದೇ ಅನುಮಾನಸ್ಪದ ವಸ್ತುಗಳು ಸಿಗದೆ ಇದ್ದಾಗ ಇದೊಂದು ಹುಸಿ ಬೆದರಿಕೆ ಇಮೇಲ್ ಎಂದು ದೃಢಪಡಿಸಿದ್ದಾರೆ. ಈ ಕುರಿತು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net