

ಬೆಂಗಳೂರು: ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ಆದಾಯ ತರುತ್ತಿರುವ ಅಬಕಾರಿ ಇಲಾಖೆಯಲ್ಲಿ ಒಂದಿಲ್ಲೊಂದು ಎಡವಟ್ಟು ನಡೆಯುತ್ತಲೇ ಇವೆ. ಜಿಲ್ಲಾ ಮಟ್ಟದ ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ಅಬಕಾರಿ ಅಧೀಕ್ಷಕರ ಪದನಾಮವನ್ನು ಹೆಚ್ಚುವರಿ ಅಬಕಾರಿ ಉಪ ಆಯುಕ್ತ(ಎಡಿಸಿ) ಹುದ್ದೆ ಬದಲಾವಣೆಗೆ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಸರ್ಕಾರ, ಕೆಲವರಿಗೆ ಅನುಕೂಲ ಮಾಡಿಕೊಳ್ಳಲು ನಿಯಮಬಾಹಿರವಾಗಿ ಕೆಲ ಹಂತದ ಹುದ್ದೆಗಳನ್ನು ಮೇಲ್ದರ್ಜೆಗೇರಿಸಿದರೆ, ಮೇಲ್ದರ್ಜೆಗೇರಿಸಿದ ಕೆಲ ಹುದ್ದೆಗಳನ್ನು ಕೆಳದರ್ಜೆಗೆ ಇಳಿಸಿ ಆದೇಶ ಹೊರಡಿಸಿದೆ.
ರಾಜ್ಯದ ವಿವಿಧ ಡಿಸ್ಟಿಲರಿ, ಬ್ರಿವರಿ, ವೈನರಿ, ಮೈಕ್ರೋಬ್ರಿವರಿ ಮತ್ತು ಕರ್ನಾಟಕ ರಾಜ್ಯ ಪಾನೀಯ ನಿಗಮದ (ಕೆಎಸ್‌ಬಿಸಿಎಲ್) ಡಿಪೋಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 39 ಅಬಕಾರಿ ಅಧೀಕ್ಷಕರ ಹುದ್ದೆಗಳನ್ನು ಅಬಕಾರಿ ಉಪ ಅಧೀಕ್ಷಕರ ಹುದ್ದೆಯ ಕೆಳದರ್ಜೆಗೆ (’ಬಿ’ವೃಂದ) ಇಳಿಸಲಾಗಿದೆ. ಅದೇರೀತಿ, ಪ್ರತಿ ಜಿಲ್ಲೆಯಲ್ಲಿ ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿರುವ ಕಾರ್ಯನಿರ್ವಹಿಸುತ್ತಿರವ 39 ಅಬಕಾರಿ ಉಪ ಅಧೀಕ್ಷಕರ ಹುದ್ದೆಗಳನ್ನು ಅಬಕಾರಿ ಅಧೀಕ್ಷಕರ (‘ಎ’ ವೃಂದ) ಹುದ್ದೆಗೆ ಮೇಲ್ದರ್ಜೆಗೇರಿಸಲಾಗಿದೆ. ಇದರಲ್ಲಿ ಕೆಲವರಿಗೆ ಅನುಕೂಲ ಮಾಡಿಕೊಳ್ಳಲು ಮರು ವಿನ್ಯಾಸ ಹೆಸರಿನಲ್ಲಿ ಸರ್ಕಾರ ಮೇಲ್ದರ್ಜೆಗೇರಿಸಿದ ಹುದ್ದೆಗಳನ್ನು ಕೆಳದರ್ಜೆಗೇರಿಸಿ, ಕೆಳದರ್ಜೆಗೇರಿಸಿದ ಹುದ್ದೆಯನ್ನು ಮೇಲ್ದರ್ಜೆಗೇರಿಸಿದೆ. ಮರು ವಿನ್ಯಾಸದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಗಂಭೀರ ಆರೋಪಗಳಿವೆ.
ಸ್ಥಳ ನಿಯುಕ್ತಿಗೆ ಬೇಡಿಕೆ: ಡಿಸ್ಟಿಲರಿ, ಬ್ರಿವರಿ, ವೈನರಿ, ಮೈಕ್ರೋಬ್ರಿವರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಅಡ್ಡದಾರಿಯಲ್ಲಿ ಕೋಟ್ಯಂತರ ರೂಪಾಯಿ ಸಂಪಾದಿಸಲು ಆಗುವುದಿಲ್ಲ. ಆದರೆ, ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ಪ್ರತಿ ನಿತ್ಯ ಆಡಳಿತಾತ್ಮಕ ಕೆಲಸಗಳಿಂದ ಕೆಲ ಅಧಿಕಾರಿಗಳು ಅಕ್ರಮವಾಗಿ ಕೋಟ್ಯಂತರ ರೂಪಾಯಿ ಮಾಡಿಕೊಳ್ಳುತ್ತಾರೆ. ಹಾಗಾಗಿ, ಕೆಲವರು ಇಂತಹ ಜಿಲ್ಲೆಗಳಿಗೆ ಸ್ಥಳ ನಿಯುಕ್ತಿ ಮಾಡುವಂತೆ ಸಂಬಂಧಪಟ್ಟವರ ಬಳಿ ದುಂಬಾಲು ಬಿದ್ದಿದ್ದಾರೆ. ಇದಕ್ಕಾಗಿ ಕೋಟ್ಯಂತರ ರೂಪಾಯಿ ಲಂಚ ಕೈ ಬದಲಾಗುತ್ತಿದೆ.
ಅಧಿಕಾರ ಮೊಟಕು: ಹಿರಿತನ, ಅನುಭವ ಆಧಾರದಲ್ಲಿ ಕೆಳದರ್ಜೆದಲ್ಲಿದ್ದ ಹುದ್ದೆಯನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ಆದರೆ, ಇಲಾಖೆಯಲ್ಲಿ ಮೇಲ್ದರ್ಜೆಗೇರಿಸಿದ ಹುದ್ದೆಗಳನ್ನು ಕೆಳದರ್ಜೆಗೆ ಇಳಿಸಲಾಗಿದೆ. ಡಿಸ್ಟಿಲರಿಯಲ್ಲಿ ಅಬಕಾರಿ ಅಧೀಕ್ಷಕರಿಗೆ ಸಾಕಷ್ಟು ಕೆಲಸಗಳು ಇರುತ್ತದೆ. ಕೋಟ್ಯಂತರ ರೂಪಾಯಿ ಸ್ಪಿರಿಟಿ ಇರುತ್ತದೆ. ಇದರ ಮೇಲೆ ನಿಗಾವಹಿಸುವುದು ಅವರ ಕರ್ತವ್ಯ. ಜಿಲ್ಲಾ ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ಎರಡು ‘ಎ’ ಹುದ್ದೆಯನ್ನು ಸೃಷ್ಟಿಸಲಾಗಿದೆ. ಇದರಿಂದ ಸರ್ಕಾರ ಬೊಕ್ಕಸಕ್ಕೆ ಹೆಚ್ಚುವರಿ ಹೊರೆ ಬೀಳುವುದಲ್ಲದೆ. ಅಬಕಾರಿ ಉಪ ಆಯುಕ್ತರ ಹುದ್ದೆಯ ಅಧಿಕಾರವನ್ನು ಮೊಟಕುಗೊಳ್ಳಲಿದೆ. ಕೆಳ ಹಂತದ ಅಧಿಕಾರಿಗಳಿಗೂ ದೈನಂದಿನ ಮಾರ್ಗದರ್ಶನ ಪಡೆಯಲು ಗೊಂದಲವಾಗಲಿದೆ. ವಾಹನ ಸೇರಿ ಮೂಲಸೌಕರ್ಯ ಕಲ್ಪಿಸಲು ಸರ್ಕಾರಕ್ಕೆ ಆರ್ಥಿಕ ಹೊರೆಯಾಗಲಿದೆ. ಒಂದೇ ಕಚೇರಿಯಲ್ಲಿ ಎರಡು ಗ್ರೂಪ್ ಎ ಸೃಷ್ಠಿಸುವುದು ಆಡಳಿತಾತ್ಮಕ ಹಿತದೃಷ್ಟಿಯಿಂದ ಒಳ್ಳೆಯದಲ್ಲ.
ನುಲುಗಿದ ಇಲಾಖೆ: ಆಂತರಿಕವಾಗಿ ಹಲವು ಸಮಸ್ಯೆಗಳು ಇಲಾಖೆಯಲ್ಲಿ ಹಾಸು ಹೊದ್ದು ಮಲಗಿವೆ. ಅಕ್ರಮ ಮದ್ಯ ಮಾರಾಟ ತಡೆಯಲು ಇಲಾಖೆ ನಿರ್ಲಕ್ಷ್ಯವಹಿಸಿದರೆ, ಕೆಲ ಅಧಿಕಾರಿಗಳ ಹಿಡಿತದಲ್ಲಿ ಇಲಾಖೆ ಇದೆ. ವರ್ಗಾವಣೆ ದಂಧೆ, ಮಥ್ಲಿ ಮನಿ ದಂಧೆ ಹಾಗೂ ಅಧಿಕಾರಿಗಳ ಹಣದ ದಾಹ ಸೇರಿ ಇನ್ನಿತರ ಭ್ರಷ್ಟಾಚಾರಗಳು ಇಲಾಖೆಯಲ್ಲಿ ಮೀತಿ ಮೀರಿವೆ. ಈ ಬಗ್ಗೆ ಸರ್ಕಾರಕ್ಕೂ ಮಾಹಿತಿ ಇದ್ದರೂ ಕ್ರಮ ಕೈಗೊಳ್ಳಲು ವಿಫಲವಾಗಿದೆ. ಈ ಹಿಂದೆ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಇಲಾಖೆಯಲ್ಲಿ ವರ್ಗಾವಣೆ ದಂಧೆ ಜೋರಾಗಿತ್ತು. ಆಡಳಿತಾತ್ಮಕವಾಗಿ ಅಗತ್ಯವಿರುವ ಖಾಲಿ ಸ್ಥಾನಗಳನ್ನು ತುಂಬುವುದಕ್ಕೆ ಹೊರತಾಗಿ ಬೇರೆ ಯಾವ ವರ್ಗಾವಣೆಗಳನ್ನು 2021ನೇ ಸಾಲಿನ ಸಾಮಾನ್ಯ ವರ್ಗಾವಣೆವರೆಗೆ ಮಾಡಬಾರದೆಂದು ಸರ್ಕಾರ ಆದೇಶ ಉಲ್ಲಂಘಿಸಿ ಇಲಾಖೆಯ ಗ್ರೂಪ್ ಬಿ ಮತ್ತು ಸಿ ವೃಂದದ 72 ಸಿಬ್ಬಂದಿಯನ್ನು ಒಂದೇ ಬಾರಿಗೆ ವರ್ಗಾವಣೆ ಮಾಡಲಾಗಿತ್ತು.