ಸಂಬಂಧಿಯ ಅಂತ್ಯಸಂಸ್ಕಾರಕ್ಕೆ ಹೊರಟಿದ್ದ ಒಂದೇ ಕುಟುಂಬದ ಮೂವರು ಮಾರ್ಗದಲ್ಲೇ ದುರ್ಮರಣ! ರಾಯಚೂರಲ್ಲಿ ದುರಂತ

accident
Published on

ರಾಯಚೂರು: ಸಿರವಾರ ತಾಲೂಕಿನ ಹೊಕ್ರಾಣಿ ಕ್ರಾಸ್ ಬಳಿ ಮಂಗಳವಾರ ಈಚರ್ ವಾಹನ ಮತ್ತು ಬೈಕ್ ನಡುಬೆ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ದುರ್ಮರಣಕ್ಕಿಡಾಗಿದ್ದಾರೆ.

ಬಸವರಾಜ್ ಮಾಸಳಿ(40), ಬಸವರಾಜ್​ರ ಪುತ್ರ ನರೇಶ್(8) ಮತ್ತು ಚಿಕ್ಕಮ್ಮ ಭೀಮವ್ವ ಮಾಸಳಿ(50) ಮೃತ ದುರ್ದೈವಿಗಳು. ಮೃತರೆಲ್ಲರೂ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದ ನಿವಾಸಿಗಳು. ಸಂಬಂಧಿಕರೊಬ್ಬರು ಮೃತಪಟ್ಟಿದ್ದ. ಅವರ ಅಂತ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಈ ಮೂವರು ಒಂದೇ ಬೈಕ್​ನಲ್ಲಿ ಕಲ್ಲೂರಿನಿಂದ ಕುರ್ಡಿ ಗ್ರಾಮಕ್ಕೆ ಹೊರಟಿದ್ದರು.

ಮಾರ್ಗಮಧ್ಯೆ ಈಚರ್ ಲಾರಿ ರೂಪದಲ್ಲಿ ಬಂದ ಜವರಾಯ ಮೂವರ ಪ್ರಾಣ ಹೊತ್ತೊಯ್ದಿದ್ದಾನೆ. ರಾಯಚೂರು ಮಾರ್ಗವಾಗಿ ಹೊರಟಿದ್ದ ಈಚರ್​ ವಾಹನ ವೇಗವಾಗಿ ಚಲಿಸುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿದ ವಾಹನ ಬೈಕ್​ಗೆ ಡಿಕ್ಕಿ ಹೊಡೆದು ರಸ್ತೆಬದಿಯ ಜಮೀನಿನತ್ತ ನುಗ್ಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್​ನಲ್ಲಿದ್ದ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದು, ಶವಗಳು ರಸ್ತೆ ಬದಿಯ ಜಮೀನಿನಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೃಶ್ಯ ಬೆಚ್ಚಿಬೀಳಿಸುವಂತಿತ್ತು.

ಅಪಘಾತ ಸಂಭವಿಸುತ್ತಿದ್ದಂತೆ ಲಾರಿ ಚಾಲಕ ಪರಾರಿಯಾಗಿದ್ದಾನೆ. ಸಿರವಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೂವರ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net