

| ಮೃತ್ಯುಂಜಯ ಕಪಗಲ್ ಬೆಂಗಳೂರು
ಅರಣ್ಯ ಭೂಮಿ ಒತ್ತುವರಿ ತೆರವು ವಿಚಾರದಲ್ಲಿ ರಾಜ್ಯ ಸರ್ಕಾರದ ವಿಳಂಬ ಹಾಗೂ ದ್ವಂದ್ವ ಧೋರಣೆಯಿಂದಾಗಿ ಅರಣ್ಯ ಪ್ರದೇಶಾಭಿವೃದ್ಧಿಯೇ ಹೊರೆಯಾಗಿ ಪರಿಣಮಿಸಿದೆ. ಪರಿಸರ ಅಸಮತೋಲನ, ಮಾನವ-ಪ್ರಾಣಿ ಸಂಘರ್ಷ, ಕಾಡು ಪ್ರಾಣಿಗಳ ಹಾವಳಿ ತಡೆಗೆ ಅರಣ್ಯ ಸಂರಕ್ಷಣೆ ಮತ್ತು ಅಭಿವೃದ್ಧಿ ಏಕೈಕ ಪರಿಹಾರ ಮಾರ್ಗವೆಂದು ಅಧ್ಯಯನ ವರದಿಗಳು ಸಾರಿವೆ. ಕೇಂದ್ರ ಸರ್ಕಾರದ ಅರಣ್ಯ ಸಂರಕ್ಷಣಾ ಕಾಯ್ದೆ ಚಾಚೂ ತಪ್ಪದೇ ಅನುಷ್ಠಾನಕ್ಕೆ ತರುವುದಾಗಿ ರಾಜ್ಯ ಸರ್ಕಾರ ಒಪ್ಪಿಕೊಂಡು, ಈ ಕುರಿತು ಸುಪ್ರೀಂ ಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿದೆ. ರಾಜ್ಯದಲ್ಲಿ ಮೂರು ಎಕರೆ ಒಳಗಿನ ಒತ್ತುವರಿ ಪ್ರಕರಣಗಳ ಸಂಖ್ಯೆ 87,000 ಆಸುಪಾಸಿನಲ್ಲಿದ್ದು, 1.16 ಲಕ್ಷ ಎಕರೆ ಅರಣ್ಯ ಪ್ರದೇಶ ಒತ್ತುವರಿಯಾಗಿದೆ ಎಂದು ಗುರುತಿಸಲಾಗಿದೆ. ಈ ಒತ್ತುವರಿ ತೆರವು ಕಾಲಮಿತಿಯೊಳಗೆ ಪೂರ್ಣಗೊಳಿಸಿ, ಪ್ರಗತಿ ವರದಿ ಕಾಲ ಕಾಲಕ್ಕೆ ಹೈಕೋರ್ಟ್ಗೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ ಆದರೂ ಈವರೆಗೆ ತೆರವು ಕಾರ್ಯ ಆರಂಭಿಸಿಲ್ಲ.
ಕಾಲಯಾಪನೆ ತಂತ್ರ: ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಕೆ, ತೆರವಿಗೆ ಆರಂಭಿಕ ಉತ್ಸಾಹ ತೋರಿಸಿದ ಸರ್ಕಾರ ನಂತರ ಕಾಲಯಾಪನೆ ತಂತ್ರಕ್ಕೆ ಮೊರೆಹೋಗಿದೆ. ಉನ್ನತ ಮೂಲಗಳು ನೀಡಿದ ಮಾಹಿತಿ ಪ್ರಕಾರ ಪ್ರಸಕ್ತ ವರ್ಷದ ಜುಲೈವರೆಗೆ 4,000 ಎಕರೆ ಅರಣ್ಯ ಜಮೀನು ಒತ್ತುವರಿ ತೆರವಿಗೆ ಸರ್ಕಾರ ಶಕ್ತವಾಗಿದೆ. ಒತ್ತುವರಿದಾರರ ಪಟ್ಟಿಯಲ್ಲಿ ಬಹುತೇಕರು ಬಡವರು, ಶೋಷಿತ ಸಮುದಾಯಗಳು, ತಲೆ ತಲೆ ತಲಾಂತರದಿಂದ ಇದೇ ತುಂಡು ಜಮೀನಿನಲ್ಲಿ ಬದುಕು ಕಟ್ಟಿಕೊಂಡವರಿದ್ದಾರೆ. ಇಂತಹವರ ನೆರಳಿನಲ್ಲಿ ಪ್ರಭಾವಿಗಳು, ಬಲಿಷ್ಠರು ಆಸರೆ ಪಡೆದುಕೊಂಡಿದ್ದು, ಸರ್ಕಾರಕ್ಕೆ ಕಗ್ಗಂಟಾಗಿದೆ.
ಬಾಧಿತರಿಗೆ ಪುನರ್ವಸತಿ ಮತ್ತು ಪುನರ್ ವ್ಯವಸ್ಥೆ ಪ್ಯಾಕೇಜ್ ರೂಪಿಸುವ ಕಾರಣ ಮುಂದೊಡ್ಡಿ ಒತ್ತುವರಿ ತೆರವು ಪ್ರಕ್ರಿಯೆಗೆ ಸರ್ಕಾರ ತಾತ್ಕಾಲಿಕ ಬ್ರೇಕ್ ಹಾಕಿದೆ. ಪುನರ್ವಸತಿಗೆ 15,000 ಕೋಟಿ ರೂ. ಅಗತ್ಯವಿದೆ ಎಂದು ತಾತ್ಪೂರ್ತಿಕವಾಗಿ ಅಂದಾಜಿಸಿದ್ದು, ಪುನರ್ ವ್ಯವಸ್ಥೆಗೆ ಪರ್ಯಾಯ ಜಮೀನು ಕೊರತೆ ಸರ್ಕಾರಕ್ಕೆ ಮತ್ತೊಂದು ದೊಡ್ಡ ಸವಾಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಭಿವೃದ್ಧಿಗೆ ಹೊರೆ: ಅರಣ್ಯ ಜಮೀನು ಒತ್ತುವರಿ ತೆರವಿಗೆ ಆರ್ಥಿಕ, ಪರ್ಯಾಯ ಜಮೀನಿನ ಅಭಾವವಿದ್ದರೆ, ಪರಿಗಣಿತ ಅರಣ್ಯ (ಡೀಮ್್ಡ ಫಾರೆಸ್ಟ್) ಪ್ರದೇಶಕ್ಕೆ ಸಾಮಾಜಿಕ-ಆರ್ಥಿಕ ಸಮಸ್ಯೆ ತಳುಕು ಹಾಕಿಕೊಂಡಿದೆ. ಕಂದಾಯ ಮತ್ತು ಅರಣ್ಯ ಇಲಾಖೆ ನಡುವಿನ ನಿರಂತರ ಮಾತುಕತೆ ಫಲಪ್ರದವಾಗಿದ್ದರಿಂದ ಒಟ್ಟು 9.50 ಲಕ್ಷ ಹೆಕ್ಟೇರ್ ಡೀಮ್್ಡ ಫಾರೆಸ್ಟ್ನಲ್ಲಿ ಆರು ಲಕ್ಷ ಹೆಕ್ಟೇರ್ ಕಂದಾಯ ಇಲಾಖೆಗೆ ಮರಳಿಸಲು ವೇದಿಕೆ ಸಜ್ಜಾಗಿದೆ. ಸುಪ್ರೀಂ ಕೋರ್ಟ್ಗೆ ಈ ಕುರಿತು ಪೂರಕ ಅಫಿಡವಿಟ್ನ್ನು ಸರ್ಕಾರ ಸಲ್ಲಿಸಿದ್ದು, ಡೀಮ್್ಡ ಫಾರೆಸ್ಟ್ ವ್ಯಾಪ್ತಿಯಿಂದ ಆರು ಲಕ್ಷ ಹೆಕ್ಟೇರ್ ಹೊರಬರಲು ಕಾದು ಕುಳಿತಿದೆ. ಇದರಿಂದಾಗಿ ಅರಣ್ಯಾಭಿವೃದ್ಧಿಗೆ ಹೊರೆಯಾಗಿದೆ.
ಅರಣ್ಯ ಜಮೀನು ಕ್ರಮೇಣ ಇಳಿಕೆ: ಆಧುನಿಕರಣದ ಅಬ್ಬರ, ನೈಸರ್ಗಿಕ, ಜನಸಂಖ್ಯೆ ಬೆಳವಣಿಗೆ, ಮಾನವ ನಿರ್ವಿುತ ದೋಷದಿಂದಾಗಿ ಅರಣ್ಯ ಪ್ರದೇಶ ಇಳಿಕೆಯಾಗಿರುವುದು ಕಳವಳಕಾರಿ ಅಂಶವಾಗಿದೆ. ವಾರ್ಷಿಕ ಸರಾಸರಿ ಲೆಕ್ಕಾಚಾರದ ಪ್ರಕಾರ 2019-20ರಲ್ಲಿ 43,427.85 ಚದರ ಕಿಲೋ ಮೀಟರ್ ಅರಣ್ಯ ಪ್ರದೇಶವು 2020-21ರ ಅಂತ್ಯಕ್ಕೆ 41,590.16 ಚ.ಕಿ.ಮೀ.ಗೆ ಇಳಿದಿದೆ. ಆದರೆ 2021ರ ಸೆಪ್ಟೆಂಬರ್ನ ಮಧ್ಯಂತರ ವರದಿಯಂತೆ 4,219.63 ಚ.ಕಿ.ಮೀ ಏರಿಕೆಯಾಗಿದ್ದು, ಅರಣ್ಯ ನಶಿಸುವ ಪ್ರಮಾಣಕ್ಕೆ ಹೋಲಿಸಿದರೆ ದೊಡ್ಡ ಸಾಧನೆಯಲ್ಲ ಎನ್ನುತ್ತವೆ ಅರಣ್ಯ ಇಲಾಖೆ ಮೂಲಗಳು.
ಅಧಿಕಾರಿಗಳಿಗೆ ಕಠಿಣ ಟಾಸ್ಕ್: ಪ್ರತಿ ಜಿಲ್ಲೆಯು ಶೇ.30 ಅರಣ್ಯ ಜಮೀನು ಹೊಂದಿರಬೇಕು ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಅವರು ಅಧಿಕಾರಿಗಳಿಗೆ ಕಠಿಣ ಟಾಸ್ಕ್ ನೀಡಿದ್ದಾರೆ. ಮೇಲ್ನೋಟಕ್ಕೆ ಆಕರ್ಷಕ, ಅರಣ್ಯದ ಕಳಕಳಿ, ಗಮನಸೆಳೆಯುವ ಗುರಿಯಾಗಿದೆ. ವಾಸ್ತವಿಕವಾಗಿ ಈ ಗುರಿ ಕಾರ್ಯಸಾಧುವೂ ಅಲ್ಲ, ಅಷ್ಟೊಂದು ಜಮೀನು ಲಭ್ಯವಿಲ್ಲ. ಚಾಲ್ತಿ ಅರಣ್ಯ ಪ್ರದೇಶವು ಡಿ ಗ್ರೇಡ್ ಆಗುತ್ತಿದೆ. ದಟ್ಟ ಕಾನನ ಕರಗಿ ಕುರುಚಲು ಪ್ರದೇಶ, ನೀಲಗಿರಿ, ಅಕೇಶಿಯಾ, ಕಳೆಯಂತಹ ಆಮದು ತಳಿಗಳ ಉಪಟಳದಿಂದ ನಿಸರ್ಗದತ್ತ ಅರಣ್ಯ ಸೊಬಗು, ವೃದ್ಧಿ ಮರೆಯಾಗಿವೆ. ಏಳೆಂಟು ಜಿಲ್ಲೆಗಳು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಶೇ.1ರಿಂದ 20ರೊಳಗೆ ಅರಣ್ಯ ಪ್ರದೇಶವಿದೆ. ಶೇ.30ಕ್ಕೆ ಹೆಚ್ಚಳ ಕಬ್ಬಿಣದ ಕಡಲೆಯಾಗಲಿದ್ದು, ಒತ್ತುವರಿ ತೆರವಿಗೆ ಒದ್ದಾಡುತ್ತಿರುವಾಗ ಹೊಸದಾಗಿ ಅರಣ್ಯ ಪ್ರದೇಶ ಸೃಷ್ಟಿಗೆ ಜಮೀನು ಹೊಂದಿಸುವುದು ಕಷ್ಟ ಸಾಧ್ಯವೆಂದು ಇಲಾಖೆ ಮೂಲಗಳು ಅಸಹಾಯಕತೆ ವ್ಯಕ್ತಪಡಿಸಿವೆ.
ಎಷ್ಟಿದೆ ಅರಣ್ಯಪ್ರದೇಶ?: ವಿಜಯಪುರ ಜಿಲ್ಲೆಯಲ್ಲಿ ಅತಿ ಕಡಿಮೆ ಶೇ.0.85 ಅರಣ್ಯ ಪ್ರದೇಶವಿದೆ. ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್, ಕೊಪ್ಪಳ, ಬೆಳಗಾವಿ ಜಿಲ್ಲೆಗಳಲ್ಲಿ ಶೇ.4 ರಿಂದ 6ರಷ್ಟು ಅರಣ್ಯವಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಮೈಸೂರು, ರಾಮನಗರ, ಚಿತ್ರದುರ್ಗ, ಬಳ್ಳಾರಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ಶೇ.9 ರಿಂದ 20ರಷ್ಟು ಅರಣ್ಯ ಪ್ರದೇಶವಿದೆ. ಕೊಡಗು ಶೇ.62.09, ಚಾಮರಾಜನಗರ ಶೇ.28.47, ಉತ್ತರಕನ್ನಡ ಶೇ.75.27, ಉಡುಪಿ ಶೇ.55.23, ದಕ್ಷಿಣಕನ್ನಡ ಶೇ.34.86, ಚಿಕ್ಕಮಗಳೂರು ಶೇ.47.80 ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಶೇ.38.45ರಷ್ಟು ಅರಣ್ಯ ಪ್ರದೇಶವಿದೆ ಎಂದು ಅಧಿಕೃತ ಅಂಕಿ-ಅಂಶಗಳು ಹೇಳುತ್ತವೆ.