

ಮಡಿಕೇರಿ: ಆನೆ ದಂತದಲ್ಲಿ ನಿರ್ಮಿಸಿದ್ದ ಟ್ರೋಫಿಯನ್ನು ಮಾರಾಟ ಮಾಡಲು ಯತ್ನಿಸಿ ಇಬ್ಬರು ಅರಣ್ಯ ಸಂಚಾರಿ ದಳದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ರಫೀಕ್ ಅಹಮದ್ ಖಾನ್ ಹಾಗೂ ಫಾಜಿಲ್ ಖಾನ್ ಬಂಧಿತರು. ಇವರಿಬ್ಬರೂ ಮಡಿಕೇರಿಯ ಚೈನ್ ಗೇಟ್ ಬಳಿಯ ಹಿಂದು ರುದ್ರಭೂಮಿ ಮುಂಭಾಗದ ರಸ್ತೆಯಲ್ಲಿ ಭಾನುವಾರ ಸಂಜೆ ಅಕ್ರಮವಾಗಿ ಸಂಗ್ರಹಿಸಿದ್ದ ಆನೆ ದಂತದಲ್ಲಿ ಕೆತ್ತಲಾದ ಟ್ರೋಫಿಯನ್ನು ಮಾರಾಟಕ್ಕೆ ಯತ್ನಿಸುತ್ತಿದ್ದರು. ಈ ವೇಳೆ ದಾಳಿ ಮಾಡಿದ ಮಡಿಕೇರಿ ಅರಣ್ಯ ಸಂಚಾರ ದಳದ ಸಬ್ ಇನ್ಸ್ಪೆಕ್ಟರ್ ಸಿ.ಯು. ಸವಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ, ಆನೆ ದಂತದ ಟ್ರೋಫಿಯನ್ನ ವಶಕ್ಕೆ ಪಡೆದಿದೆ.