

ಕೋಲಾರ: ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಎಲ್ಲ ಸಮುದಾಯಗಳಿಗೆ ಪೇಟೆಗಳನ್ನು ಸ್ಥಾಪಿಸಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದರು. ಅವರೆಲ್ಲೂ ಒಕ್ಕಲಿಗರಪೇಟೆ ಸ್ಥಾಪಿಸಲಿಲ್ಲ. ಸರ್ವರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಒಕ್ಕಲಿಗರ ಬುಡವೇ ಭದ್ರವಾಗಿರದಿದ್ದರೆ ಇತರರನ್ನು ಕರೆದೊಯ್ಯುವುದಾದರೂ ಹೇಗೆ? ಸರ್ಕಾರ ಇದನ್ನು ಅರ್ಥೈಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಶ್ರೀಗಳು, ಬೆಂಗಳೂರು ಸುತ್ತ ಶೇ.60 ಒಕ್ಕಲಿಗ ಸಮುದಾಯವಿದ್ದು, ಬಹುತೇಕ ಮಂದಿ ಜಮೀನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಪ್ರಸ್ತುತ 1.5 ಕೋಟಿ ಜನಸಂಖ್ಯೆಯಿದ್ದು, 2050ಕ್ಕೆ 4.5ಕೋಟಿಯಾಗಲಿದೆ ಎಂದು ಮುಖ್ಯಮಂತ್ರಿಯವರೇ ಇತ್ತೀಚೆಗೆ ತಿಳಿಸಿದ್ದಾರೆ. ಹಾಗಾದರೆ 30 ವರ್ಷಕ್ಕೆ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ಎಲ್ಲ ರೈತರು ಜಮೀನುಗಳನ್ನು ಕಳೆದುಕೊಳ್ಳುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು. ಇಂತಹ ವಿಚಾರಗಳ ಬಗ್ಗೆ ಜನಪ್ರತಿನಿಧಿಗಳು ಹೋರಾಡಲು ಸಿದ್ಧರಿರಬೇಕು ಎಂದು ಸೂಚಿಸಿದರು.
ಮಠದ ಸಮೀಕ್ಷೆಯಲ್ಲಿ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ನ ಸ್ಲಂನಲ್ಲಿ ಹೆಚ್ಚಿನ ಒಕ್ಕಲಿಗರು ವಾಸಿಸುತ್ತಿರುವುದು ಕಂಡುಬಂದಿದೆ. ಬೆಂಗಳೂರು ಅಭಿವೃದ್ಧಿಯಿಂದ ಹೆಚ್ಚು ಒಕ್ಕಲಿಗರು ನಿರ್ಗತಿಕರಾಗುತ್ತಿದ್ದಾರೆ. ಈ ಬಗ್ಗೆ ಮಠ, ಸಂಘ ಸೇರಿ ಸಮಿತಿ ರಚಿಸಿ ಸರ್ವೇ ಮಾಡುತ್ತೇವೆ ಎಂದು ಸ್ವಾಮೀಜಿ ಹೇಳಿದರು.