ನನ್ನನ್ನು ಪವರ್ ಸೆಂಟರ್ ಎಂದು ಬಿಂಬಿಸಬೇಡಿ... ಶಾಸಕರಿಗೆ ಯಡಿಯೂರಪ್ಪ ವಾರ್ನಿಂಗ್​

BSY
Published on

ಬೆಂಗಳೂರು: ನನ್ನನ್ನು‌ ಪವರ್ ಸೆಂಟರ್ ಎಂದು ಬಿಂಬಿಸಬೇಡಿ... ಪದೇಪದೆ ನನ್ನ‌ನ್ನು ಭೇಟಿ ಮಾಡಿ ಬಳಿಕ ಸಚಿವ ಸ್ಥಾನದ ಬಗ್ಗೆ ಹೊರಗೆ ಮಾತನಾಡಬೇಡಿ... ಎಂದು ಶಾಸಕರಿಗೆ ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಖಡಕ್​ ವಾರ್ನಿಂಗ್​ ಕೊಟ್ಟಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮ ಕೊಟ್ಟ ಬಿಎಸ್​ವೈ, ತನ್ನ ಶಿಷ್ಯ ಬಸವರಾಜ ಬೊಮ್ಮಾಯಿ ಅವರಿಗೆ ಪಟ್ಟಾಭಿಷೇಕ ಮಾಡುವಲ್ಲಿಯೂ ಯಶಸ್ವಿಯಾಗಿದ್ದಾರೆ. ಇನ್ನು ಸಂಪುಟ ವಿಸ್ತರಣೆಯಲ್ಲೂ ಬಿಎಸ್​ವೈ ಪ್ರಭಾವ ಹೆಚ್ಚು ಬೀರಲಿದ್ದು, ಇದನ್ನು ಅರಿತ ಸಚಿವ ಸ್ಥಾನ ಆಕಾಂಕ್ಷಿತರು ಯಡಿಯೂರಪ್ಪ ಮನೆ ಬಳಿಯೇ ಗಿರಕಿ ಹೊಡೆಯುತ್ತಿದ್ದಾರೆ. ಈ ಕುರಿತು ಶಾಸಕರಿಗೆ ಇಂದು ಬುದ್ಧಿ ಮಾತು ಹೇಳಿದ ಯಡಿಯೂರಪ್ಪ, ಸಂಜೆ 6 ಗಂಟೆ ತನಕ ಯಾರೂ ನನ್ನನ್ನು ಭೇಟಿ ಮಾಡಬೇಡಿ ಎಂದು ಸೂಚನೆ ಕೊಟ್ಟಿದ್ದಾರೆ.

ಸಚಿವ ಸ್ಥಾನವನ್ನ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ನಿರ್ಧಾರ ಮಾಡ್ತಾರೆ. ನಾನು ಏನೋ ಒಂದಿಬ್ಬರಿಗೆ ಹೇಳಬಹುದು, ಆದ್ರೆ ನಾನು ಹಸ್ತಕ್ಷೇಪ ಮಾಡಲಾರೆ. ನನ್ನ ಹೆಸರನ್ನು ಸುಖಾಸುಮ್ಮನೆ ಎಳೆದು ತರಬೇಡಿ. ಸೌಹಾರ್ದಯುತವಾಗಿ ಮಾತನಾಡಿ ಹೋಗಿ, ನನ್ನ ಭೇಟಿ ಬಳಿಕ‌ ಮಾಧ್ಯಮಗಳ ಮುಂದೆ ಸಚಿವ ಸ್ಥಾನದ ಬಗ್ಗೆ ಹೇಳಿಕೆ ಕೊಡಬೇಡಿ ಆಪ್ತ ಶಾಸಕರಿಗೆ ಯಡಿಯೂರಪ್ಪ ಕಿವಿಮಾತು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net