

ವಾಷಿಂಗ್ಟನ್: ಕಳೆದ ಡಿಸೆಂಬರ್ನಲ್ಲಿ ಏಳು ವರ್ಷದ ಮಗುವೊಂದು ಟೆಕ್ಸಾಸ್ ಪಟ್ಟಣವೊಂದರ ಮೇಯರ್ ಗೌರವ ಪಡೆದುಕೊಂಡು ಎಲ್ಲರ ಹುಬ್ಬೇರಿಸಿತ್ತು.
ಮಗು ವಿಲಿಯಂ ಚಾರ್ಲ್ಸ್ ಅಲಿಯಾಸ್ ಚಾರ್ಲಿ ಮ್ಯಾಕ್ಮಿಲನ್ ವೈಟ್ಹಾಲ್ನ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ಅಮೆರಿಕದ ಮೇಯರ್ ಇತಿಹಾಸದಲ್ಲಿ ಅತ್ಯಂತ ಕಿರಿಯ ಮೇಯರ್ ಎಂಬ ಇತಿಹಾಸ ಬರೆದಿತ್ತು.
ಇದಾದ ಒಂದೇ ತಿಂಗಳಲ್ಲಿ ಅಮೆರಿಕದ ವರ್ಮಂಟ್ ರಾಜ್ಯವು ಮೇಯರ್ ಆಯ್ಕೆಯಲ್ಲಿ ವಿಚಿತ್ರ ಕ್ಷಣವೊಂದಕ್ಕೆ ಸಾಕ್ಷಿಯಾಗುತ್ತಿದೆ. ಲಿಂಕನ್ ಹೆಸರಿನ ಮೇಕೆ ಮತ್ತು ಸ್ಯಾಮಿ ಹೆಸರಿನ ನಾಯಿಯು ವರ್ಮಂಟ್ ರಾಜ್ಯದ ಪಟ್ಟಣವೊಂದರ ಮೇಯರ್ ಚುನಾವಣೆಗೆ ಸ್ಪರ್ಧೆಗೆ ಇಳಿದಿವೆ.
ಸಮುದಾಯದ ಆಟದ ಮೈದಾನ ನಿರ್ಮಿಸಲು ನಿಧಿ ಸಂಗ್ರಹಕ್ಕಾಗಿ ಸಾಕು ಪ್ರಾಣಿ ಮೇಯರ್ ಚುನಾವಣೆ ಕಲ್ಪನೆಯನ್ನು ಕಳೆದ ವರ್ಷ ಜಾರಿಗೆ ತರಲಾಯಿತು. ಕೆಳದ ವರ್ಷ ಸ್ಪರ್ಧಿಸಿದ್ದ ಲಿಂಕನ್ ಮೇಕೆ ಮೇಯರ್ ಗೌರವಕ್ಕೆ ಪಾತ್ರವಾಗಿತ್ತು. ಈ ವರ್ಷವು ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಸ್ಪರ್ಧಿಸಿದ್ದು, ಪ್ರತಿಸ್ಪರ್ಧಿಯಾಗಿ ಶ್ವಾನ ಸವಾಲೊಡ್ಡಿದೆ.
ಮೇಯರ್ ಚುನಾವಣೆ ಮಾರ್ಚ್ 3ರಂದು ನಡೆಯಲಿದೆ. ಅಲ್ಲದೆ, ಸಮುದಾಯ ಕ್ರೀಡಾ ಮೈದಾನಕ್ಕಾಗಿ ಗೋ ಫಂಡ್ ಮಿ (GoFundMe) ಪೇಜ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ತೆರೆಯಲಾಗಿದೆ. ಮತದಾನ ಮಾಡುವ ಮುಂಚೆ ಪ್ರತಿಯೊಬ್ಬ ಸದಸ್ಯನು ಒಂದು ಡಾಲರ್ ಕಾಣಿಕೆ ನೀಡಿ ಮತದಾನ ಮಾಡಬೇಕಾಗಿದೆ.
ಕ್ರೀಡಾ ಮೈದಾನ ನಿರ್ಮಿಸಲು 80 ಸಾವಿರ ಡಾಲರ್ ಬೇಕಾಗಿದ್ದು, ಈವರೆಗೂ 10 ಸಾವಿರ ಡಾಲರ್ ಸಂಗ್ರಹವಾಗಿದೆ. (ಏಜೆನ್ಸೀಸ್)