

ಬೆಂಗಳೂರು: ಸಾಕ್ಷ್ಯಚಿತ್ರವೊಂದರಲ್ಲಿ ಹಿಂದು ದೇವತೆಗೆ ಅಪಮಾಡಿರುವ ಘಟನೆ ನಡೆದಿದೆ. ಹಿಂದುಗಳು ಆರಾಧಿಸುವ ಕಾಳಿ ಮಾತೆಯ ಬಾಯಲ್ಲಿ ಸಿಗರೇಟ್ ಇಟ್ಟು ನಿರ್ದೇಶಕಿ ಲೀನಾ ಮಣಿಮೇಕಲೈ ಅವಮಾನಿಸಿದ್ದಾರೆ. ವಿವಾದಾತ್ಮಕ ಪೋಸ್ಟ್ ನೋಡಿ ಹಿಂದೂ ಸಂಘಟನೆಗಳು ರೊಚ್ಚಿಗೆದ್ದಿದ್ದು, ಕೂಡಲೇ ನಿರ್ದೇಶಕಿ ಹಿಂದುಗಳ ಬಳಿ ಕ್ಷಮೆಯಾಚಿಸುವಂತೆ ಪಟ್ಟು ಹಿಡಿದಿದ್ದಾರೆ. ಆದರೂ ನಿರ್ದೇಶಕಿ ಮಾತ್ರ ಮೊಂಡುವಾದ ಮಾಡುತ್ತಿದ್ದಾರೆ. 'ನನ್ನನ್ನು ಅರೆಸ್ಟ್ ಮಾಡಿ ಎನ್ನಬೇಡಿ, ಲವ್ ಯೂ ಲೀನಾ ಅಂತೇಳಿ' ಎಂದು ಟ್ವೀಟ್ ಮಾಡಿದ್ದಾರೆ.
ಲೀನಾ ಮೈಣಿಮೇಕಲೈ ನಿರ್ದೇಶನದ 'ಕಾಳಿ' ಡಾಕ್ಯುಮೆಂಟರಿ ಸಿನಿಮಾದ ಪೋಸ್ಟರ್ನಲ್ಲಿ ಕಾಳಿದೇವಿಯ ಒಂದು ಕೈಯಲ್ಲಿ ತ್ರಿಶೂಲ, ಮತ್ತೊಂದು ಕೈಯಲ್ಲಿ LGBTQ(ಗೇ, ಟ್ರಾನ್ಸ್ ಜೆಂಡರ್ ಸಮುದಾಯದ್ದು) ಧ್ವಜ ಹಿಡಿದಿರುವ, ಬಾಯಲ್ಲಿ ಸಿಗರೇಟ್ ಇದೆ. ಕೆನಾಡದ ಫಿಲ್ಮ್ ಪೆಸ್ಟಿವಲ್ನಲ್ಲಿ ಕಾಳಿ ಮಾತೆ ಸಿಗರೇಟ್ ಸೇದುವ ಪೋಸ್ಟರ್ ವೈರಲ್ ಆಗಿದ್ದು, ಹಿಂದು ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ. ಡಾಕ್ಯುಮೆಂಟರಿ ಫಿಲ್ಮ್ ಮೇಕರ್ ಲೀನಾ ಮಣಿಮೇಕಲೈ ಅವರು ಕಾಳಿ ದೇವಿ ಪಾತ್ರಧಾರಿ ಸಿಗರೇಟ್ ಸೇರುತ್ತಿರುವಂತೆ ಪೋಸ್ಟರ್ ಹಾಕಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಉದ್ದೇಶಪೂರ್ವಕವಾಗಿಯೇ ಹಿಂದು ದೇವತೆಗಳ ಟಾರ್ಗೆಟ್ ಮಾಡಿ ಹೀಗೆ ಮಾಡಲಾಗುತ್ತಿದೆ. ನಮ್ಮ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಕಾಣದಕೈಗಳು ಕೆಲಸ ಮಾಡುತ್ತಿವೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. #ಅರೆಸ್ಟ್ ಲೀನಾ ಮಣಿಮೇಕಲೈ ಎಂಬ ಹ್ಯಾಷ್ ಟ್ಯಾಗ್ನೊಂದಿಗೆ ಹಿಂದುಗಳು ಅಭಿಯಾನ ಶುರುಮಾಡಿದ್ದಾರೆ.
ಈ ಕುರಿತು ದಿಗ್ವಿಜಯ ನ್ಯೂಸ್ ಜತೆ ಮಾತನಾಡಿದ ಸಿ.ಟಿ.ರವಿ, ಇಂತಹವರನ್ನ ಹುಚ್ಚಾಸ್ಪತ್ರೆಗೆ ಸೇರಿಸಬೇಕು. ನಾವು ಸೈಲೆಂಟ್ ಆಗಿರೋದನ್ನೇ ದೌರ್ಬಲ್ಯ ಅಂದುಕೊಂಡು ಅವರು ಈ ರೀತಿ ಮಾಡುತ್ತಿದ್ದಾರೆ. ಹಿಂದು ದೇವರ ಬಗ್ಗೆ ಅಪಮಾನಿಸಿದ ಪ್ರಕರಣ ಸಂಬಂಧ ಕಾನೂನಾತ್ಮಕವಾಗಿ ಹೋರಾಟ ಮಾಡ್ತೀವಿ ಎಂದರು.
ನಿರ್ದೇಶಕಿ ರೂಪಾ ಅಯ್ಯರ್ ಕೂಡ ಲೀನಾ ಮಣಿಮೇಕಲೈ ವಿರುದ್ಧ ಕಿಡಿಕಾರಿದ್ದಾರೆ. ಇಂತಹವರನ್ನ ನಮ್ಮ ದೇಶಕ್ಕೆ ಬಾರದಂತೆ ನಿಷೇಧ ಹೇರಬೇಕು. ನಮ್ಮ ಧರ್ಮದ ಬಗ್ಗೆ ನೆಗೆಟಿವ್ ಆಗಿ ಯೋಚನೆ ಮಾಡಿ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಬೇರೆ ಧರ್ಮದ ಬಗ್ಗೆ ಕೆಟ್ಟದ್ದಾಗಿ ಬಿಂಬಿಸಿ ಅವರು ಬದುಕಲಿ ಎಂದು ಆಕ್ರೋಶ ಹೊರಹಾಕಿದ್ದಾರೆ.