

ಉ್ತತರ ಪ್ರದೇಶ: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ತಪಾಸಣೆ ಮಾಡಿದ ವೈದ್ಯರೇ ಕೆಲಕಾಲ ಶಾಕ್ ಆಗಿದ್ದಾರೆ. ಆ ರೋಗಿಯ ಹೊಟ್ಟೆಯಲ್ಲಿ ಬರೋಬ್ಬರಿ 62 ಚಮಚಗಳು ಪತ್ತೆಯಾಗಿದ್ದು, ಕಳೆದ ಒಂದು ವರ್ಷದಿಂದ ಆತ ಚಮಚಗಳನ್ನು ತಿನ್ನುತ್ತಿದ್ದನಂತೆ!
ಇಂತಹ ವಿಚಿತ್ರ ಪ್ರಕರಣ ಉತ್ತರ ಪ್ರದೇಶದ ಮುಜಾಫರ್ನಗರ ಜಿಲ್ಲೆಯಲ್ಲಿ ನಡೆದಿದೆ. 2 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ರೋಗಿಯ ಹೊಟ್ಟೆಯಿಂದ 62 ಚಮಚಗಳನ್ನು ಹೊರತೆಗೆದಿದ್ದರಾದರೂ ಆತನ ಆರೋಗ್ಯಸ್ಥಿತಿ ಸುಧಾರಿಸಿಲ್ಲ. ಗಂಭೀರ ಸ್ಥಿತಿಯಲ್ಲಿದ್ದಿ, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ.
ಬೊಪದ ಗ್ರಾಮದ 32 ವರ್ಷದ ವಿಜಯ್ ಮಾದಕ ವಸ್ತುಗಳ ಸೇವನೆಯ ಚಟ ಅಂಟಿಸಿಕೊಂಡಿದ್ದ. ಇದರಿಂದ ಆತನನ್ನು ದೂರವಾಗಿಸಲೆಂದು ಕುಟುಂಬಸ್ಥರು ಮಾದಕ ವ್ಯಸನ ನಿರ್ಮೂಲನಾ ಕೇಂದ್ರಕ್ಕೆ ಒಂದು ತಿಂಗಳ ಹಿಂದೆ ಸೇರಿಸಿದ್ದರು. ಇತ್ತೀಚಿಗೆ ವಿಜಯ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ತಪಾಸಣೆ ಮಾಡಿದ್ದು, ಆತನ ಹೊಟ್ಟೆಯಲ್ಲಿ ಸ್ಪೂನ್ಗಳಿರುವುದು ಗೊತ್ತಾಗಿದೆ.
ಮಾದಕ ವ್ಯಸನ ನಿರ್ಮೂಲನಾ ಕೇಂದ್ರದ ಸಿಬ್ಬಂದಿಯೇ ವಿಜಯ್ಗೆ ಬಲವಂತವಾಗಿ ಚಮಚ ನುಂಗ್ಗಿಸಿ ಹಿಂಸೆ ನೀಡಿದ್ದಾರೆ ಎಂದು ವಿಜಯ್ ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ.
ಈ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ವೈದ್ಯ ಡಾ.ರಾಕೇಶ್ ಖುರಾನಾ, 32 ವರ್ಷದ ರೋಗಿ ವಿಜಯ್ ಅವರ ಹೊಟ್ಟೆಯಿಂದ 62 ಚಮಚಗಳನ್ನು ಹೊರತೆಗೆಯಲಾಗಿದೆ. ಚಮಚಗಳನ್ನು ತಾನೇ ತಿನ್ನುತ್ತಿದ್ದೆ ಎಂದು ವಿಜಯ್ ಹೇಳಿದ್ದಾರೆ. ಅವರು ಆರೋಗ್ಯ ಸದ್ಯ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.