

ಬೆಂಗಳೂರು: ದೇಶಾದ್ಯಂತ ಪಾಪುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಸಂಘಟನೆಯನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಕಾಂಗ್ರೆಸ್ ಸ್ವಾಗತಿಸಿದೆ.
ಸಂವಿಧಾನದ ಆಶಯಕ್ಕೆ ಹಾಗೂ ಭಾರತದ ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿರುವ ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷಗಳನ್ನು ಕಾಂಗ್ರೆಸ್ ವಿರೋಧಿಸಿಕೊಂಡೇ ಬಂದಿದೆ. PFI ಸೇರಿದಂತೆ ಸಮಾಜದಲ್ಲಿ ದ್ವೇಷ ಬಿತ್ತುವ, ಶಾಂತಿ, ಸಾಮರಸ್ಯ ಕದಡುವ ಯಾವುದೇ ಸಂಘಟನೆಗಳನ್ನು ನಿಷೇಧಿಸುವುದನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಪಿಎಫ್ಐ ಬ್ಯಾನ್ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಯಾರು ಕಾನೂನಿಗೆ ವಿರುದ್ಧವಾಗಿ ಇರ್ತಾರೆ, ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಾರೋ ಅಂತಹವರ ವಿರುದ್ಧ ಕ್ರಮ ಕೈಗೊಂಡರೆ ನಮ್ಮ ವಿರೋಧ ಇಲ್ಲ. ಅದೇ ರೀತಿ ಆರ್ಎಸ್ಎಸ್ ಅವರೂ ಸಮಾಜದಲ್ಲಿ ಶಾಂತಿ ಹಾಳು ಮಾಡ್ತಿದ್ದಾರೆ. ಅವರ ಮೇಲೂ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಪಿಎಫ್ಐ ಬ್ಯಾನ್ ಮಾಡಿದ ಬಳಿಕ 'ನಾವು ನುಡಿದಂತೆ ನಡೆದಿದ್ದೇವೆ' ಎಂಬ ಬಿಜೆಪಿ ಟ್ವೀಟ್ಗೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, ಇಷ್ಟು ದಿನ ಯಾಕೆ ಮಾಡಿರಲಿಲ್ಲ? ಇಷ್ಟು ದಿನ ಏನ್ ಮಾಡ್ತಿದ್ದರು? ನಾವು ಹೇಳಿದ ಮೇಲೆ ಅವರು ಬ್ಯಾನ್ ಮಾಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಸುದೀರ್ಘವಾದ ಚಂಚಲತೆಯ ನಂತರ ಒಂದು ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಡಲಾಗಿದೆ. PFI ಜತೆಗೆ ಒಂದೇ ನಾಣ್ಯದ ಇನ್ನೊಂದು ಮುಖ ಆಗಿರುವ RSS ವಿರುದ್ಧ ಯಾವಾಗ ಕ್ರಮ ಕೈಗೊಳ್ಳುತ್ತೆ ಬಿಜೆಪಿ? ಎಲ್ಲಾ ರೀತಿಯ ಕೋಮುವಾದ ಮತ್ತು ದ್ವೇಷ ಸಮಾಜದ ರಚನೆಗೆ ಹಾನಿಕಾರಕ ಆಗಿರುವ ಅದನ್ನು ನಿಗ್ರಹಿಸುವ ಕೆಲಸ ಆಗಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆಗ್ರಹಿಸಿದ್ದಾರೆ.