ನಯಾಪೈಸೆ ಲಾಭವಿಲ್ಲದ ನಿರಾಶಾದಾಯಕ ಬಜೆಟ್

HH Devaraj
ಎಚ್.ಎಚ್.ದೇವರಾಜ್
Published on

ಚಿಕ್ಕಮಗಳೂರು: ಕೇಂದ್ರ ಬಜೆಟ್ ಜನಪರ, ರೈತ ಪರವಾಗಿರುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಯಾವ ವರ್ಗಕ್ಕೂ ನಯಾಪೈಸೆ ಲಾಭವಿಲ್ಲದ ನಿರಾಶಾದಾಯಕ ಬಜೆಟ್ ಆಗಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಅಸಮಾಧಾನ ವ್ಯಕ್ತಪಡಿಸಿದರು.

ಬಜೆಟ್‌ನಲ್ಲಿ ಸ್ವಲ್ಪವಾದರೂ ಜನಪರ ಯೋಜನೆಗಳಿಗೆ ಅವಕಾಶ ಕಲ್ಪಿಸಬೇಕಿತ್ತು. ಕಳೆದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ ಈ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನೇ ಮರೆಯಲಾಗಿದೆ. ಸಾಲ ಇಲ್ಲವೇ ಬಡ್ಡಿಮನ್ನಾ ಆಗುವುದೆಂದು ರೈತರ ನಿರೀಕ್ಷೆ ಹುಸಿಯಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಸಹಕಾರ ಸಂಘಗಳಲ್ಲಿ ರೈತರು ಮಾಡಿರುವ ದೀರ್ಘಾವಧಿ ಸಾಲ ಪಾವತಿ ಮಾಡಿದರೆ ಬಡ್ಡಿ ಮನ್ನಾ ಮಾಡುವುದಾಗಿ ರಾಜ್ಯ ಸರ್ಕಾರ ಬಜೆಟ್‌ಗೂ ಮುನ್ನವೇ ಘೋಷಿಸಿದೆ. ಇಂತಹ ಒಂದೇ ಒಂದು ಘೋಷಣೆ ಕೇಂದ್ರ ಬಜೆಟ್‌ನಲ್ಲಿ ಇಲ್ಲ. ಶೈಕ್ಷಣಿಕ ಸಾಲ ಪಡೆದು ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳ ಮೇಲೆ ಸರ್ಫೇಸಿ ಕಾಯ್ದೆಯಡಿ ಅವರ ಮನೆ ಹರಾಜು ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಜೆಟ್‌ನಲ್ಲಿ ಕಾಫಿ ಬೆಳೆಗಾರರಿಗೆ ಅನುಕೂಲ ಮಾಡಿಕೊಡುತ್ತಾರೆ ಎಂದು ಭಾವಿಸಿದ್ದೆವು. ಆದರೆ ಬಜೆಟ್‌ನಲ್ಲಿ ಎಲ್ಲಿಯೂ ಕಾಫಿ ಬೆಳೆ ಬಗ್ಗೆ ಪ್ರಸ್ತಾಪವನ್ನೇ ಮಾಡಿಲ್ಲ. ಕಾಫಿ ಬೆಳೆಗಾರರು ಹಾಗೂ ರೈತರು ಕೇಂದ್ರ ಸರ್ಕಾರದ ಬಗ್ಗೆ ಎಚ್ಚರದಿಂದಿರಬೇಕು ಎಂದರು.
ಅಕ್ಷತೆ ಕೊಟ್ಟಿದ್ದೇ ಸಾಧನೆ: ಕೇಂದ್ರ ಸಚಿವರು ಆಗಿರುವ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರು ಜನರಿಗೆ ಮಂತ್ರಾಕ್ಷತೆ ನೀಡಿದ್ದೆ ಸಾಧನೆ. ಬದಲಿಗೆ ಯಾವುದೇ ಯೋಜನೆಗಳನ್ನು ಕ್ಷೇತ್ರಕ್ಕೆ ನೀಡಿಲ್ಲ ಎಂದು ಎಚ್.ಎಚ್.ದೇವರಾಜ್ ಆರೋಪಿಸಿದರು. ಕಾಫಿ ಬೆಳೆಗಾರರಿಗೆ ಅಕ್ಷತೆ ಕಾಳು ಕೊಟ್ಟು ಕೇಂದ್ರ ಬಿಜೆಪಿ ಸರ್ಕಾರ ಮಂಕುಬೂದಿ ಎರಚಿದೆ. ಚಿಕ್ಕಮಗಳೂರು ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ. ಇದುವರೆಗೆ ಕೇಂದ್ರ ಸಚಿವರು ಜಿಲ್ಲೆಗೆ ಯಾವುದೇ ಕೊಡುಗೆ ನೀಡಿಲ್ಲ. ಈ ಬಾರಿ ಕಾಫಿನಾಡಿನ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಆರ್‌ಎಸ್‌ಎಸ್ ಎಷ್ಟು ಮೀಸಲು?: ಕೇಂದ್ರ ಸರ್ಕಾರ 44 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡನೆ ಮಾಡಿದ್ದು, ಇದರಲ್ಲಿ ಆರ್‌ಎಸ್‌ಎಸ್‌ಗೆ ಎಷ್ಟು ಕೋಟಿ ಅನುದಾನ ಮೀಸಲಿಟ್ಟಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಎಚ್.ಎಚ್.ದೇವರಾಜ್ ಒತ್ತಾಯಿಸಿದರು. ಈ ಹಿಂದೆ ಗಂಗಾ ನದಿ ಶುದ್ಧೀಕರಣ ಹೆಸರಲ್ಲಿ ಅಪಾರ ಪ್ರಮಾಣದ ಹಣ ದುರ್ಬಳಕೆಯಾಗಿದೆ. ಕೇಂದ್ರ ಸರ್ಕಾರ ಕೂಡಲೇ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಇಲ್ಲದಿದ್ದರೆ ಬಿಜೆಪಿ ನಾಯಕರು ರಾಜ್ಯದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಕಾಂಗ್ರೆಸ್ ನಾಯಕರನ್ನು ಟೀಕೆ ಮಾಡುವುದನ್ನು ಬಿಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಮಹಮದ್ ಖಾದರ್, ಪುಟ್ಟೇಗೌಡ, ರಮೇಶ್, ಇಂದಾವರ ಲೋಕೇಶ್, ಕೋಟೆ ಆನಂದ್, ಲಕ್ಯಾ ಸಂತೋಷ್, ಹಿರೇಮಗಳೂರು ರಾಮಚಂದ್ರ, ಶ್ರೀನಿವಾಸ್ ದೇವಾಂಗ, ಶಾಂತಕುಮಾರ್, ಜಯರಾಜ್ ಅರಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net