ನಿರ್ದೇಶಕ ವಿನೋದ್ ಧೋಂಡಾಲೆ ಆತ್ಮಹತ್ಯೆಗೆ ಶರಣು

sucide
Published on

ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಚಿತ್ರ ನಿರ್ದೇಶಕರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕನ್ನಡ ಕಿರುತೆರೆಯ ಖ್ಯಾತ ನಿರ್ದೇಶಕ ವಿನೋದ್ ವಿ. ದೋಂಡಾಲೆ(೪೯) ಆತ್ಮಹತ್ಯೆ ಮಾಡಿಕೊಂಡವರು. ವಿನೋದ್ ಅವರು ನಟ, ನಿರ್ದೇಶಕ, ನಿರ್ಮಾಪಕರಾಗಿಯೂ ಸಕ್ರಿಯರಾಗಿದ್ದರು.
ನಾಗರಬಾವಿಯ ಮಾರುತಿ ಸರ್ಕಲ್ ಸಮೀಪದ ನಿವಾಸದಲ್ಲಿ ಪತ್ನಿಯೊಂದಿಗೆ ವಾಸವಿದ್ದ ವಿನೋದ್ ಶನಿವಾರ ೧೧ ಗಂಟೆ ಸುಮಾರಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುದ್ದಿ ತಿಳಿದು ಚಂದ್ರಲೇಔಟ್ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಈ ವೇಳೆ ಡೆತ್‌ನೋಟ್ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅತಿಥಿ, ಬೇರು, ತುತ್ತೂರಿ, ವಿಮುಕ್ತಿ ಸೇರಿದಂತೆ ಹಲವು ಚಿತ್ರಗಳಲ್ಲಿ ವಿನೋದ್ ಕೆಲಸ ಮಾಡಿದ್ದರು.
ಕರಿಮಣಿ, ಗಂಗೆಗೌರಿ, ಶಾಂತಂ ಪಾಪಂ ಸೇರಿದಂತೆ ಹಲವು ಧಾರವಾಹಿಗಳಿಗೆ ವಿನೋದ್ ನಿರ್ದೇಶನ ಮಾಡಿದ್ದರು. ನಟ ನಿನಾಸಂ ಸತೀಶ್ ನಟನೆಯ ಅಶೋಕ ಬ್ಲೇಡ್ ಚಿತ್ರ ನಿರ್ದೇಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಮುಂದಿನ ವಾರದಿಂದ ಸಿನಿಮಾದ ಚಿತ್ರೀಕರಣ ಶುರು ಮಾಡಬೇಕಿತ್ತು.
ಕಳೆದ ಎರಡು ವರ್ಷಗಳಿಂದಲೂ ಚಿತ್ರದ ಶೂಟಿಂಗ್ ಕುಂಟುತ್ತಲೇ ಸಾಗಿತ್ತು. ಈ ಚಿತ್ರದ ನಿರ್ಮಾಪಕರೂ ಕೂಡ ಆಗಿದ್ದ ವಿನೋದ್ ಸಾಲದ ಸುಳಿಗೆ ಸಿಲುಕಿದ್ದರು. ಶುಕ್ರವಾರ ನಿನಾಸಂ ಸತೀಶ್ ಮತ್ತು ಚಿತ್ರತಂಡದ ಜತೆ ವಿನೋದ್ ಮಾತನಾಡಿ ಬಂದಿದ್ದರು ಎನ್ನಲಾಗಿದೆ. ಪಿ.ಶೇಷಾದ್ರಿ, ಟಿ.ಎನ್, ಸೀತಾರಾಂ ಅವರ ಜತೆ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಸಂಚಿಕೆ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಅಂದಾಜು ೨-೩ ಕೋಟಿ ರೂ. ಸಾಲ:
ಅಶೋಕ ಬ್ಲೇಡ್ ಚಿತ್ರಕ್ಕೆ ವಿನೋದ್ ಸೇರಿ ಇಬ್ಬರು ನಿರ್ಮಾಪಕರಾಗಿದ್ದು, ವೃದ್ದಿ ಕ್ರಿಯೇಷನ್ ಬ್ಯಾನರ್ ಅಡಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದರು. ಈ ಚಿತ್ರಕ್ಕಾಗಿ ವಿನೋದ್ ಮನೆಯ ಮೇಲೆ ೨ ರಿಂದ ೩ ಕೋಟಿ ರೂ. ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಮಾಡಿಕೊಂಡ ಸಾಲ ತೀರಿಸಲಾಗದೆ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಅಹಜಸಾವು ಪ್ರಕರಣ ದಾಖಲಿಸಿಕೊಂಡಿರುವ ಚಂದ್ರಲೇಔಟ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net