

ಅದೊಂದು ಕಾಲವಿತ್ತು. ಜಾಗತಿಕ ವೇದಿಕೆಗಳಲ್ಲಿ ಭಾರತದ ದನಿಯನ್ನು ನಿರ್ಲಕ್ಷಿಸಲಾಗುತ್ತಿತ್ತು ಇಲ್ಲವೆ ಹತ್ತಿಕ್ಕಲಾಗುತ್ತಿತ್ತು. ಅಭಿವೃದ್ಧಿ ಹೊಂದಿದ ದೇಶಗಳಂತೂ ಅಹಂಕಾರದ, ಗತ್ತಿನ ದೃಷ್ಟಿಯೊಂದಿಗೆ ‘ನಮಗೆ ಸರಿಸಮನಾರು’ ಎಂಬಂತೆ ಭಾರತದತ್ತ ನೋಡುತ್ತಿದ್ದವು. ಆದರೆ, ಕಳೆದ ಒಂದು ದಶಕದಲ್ಲಿ ಅಂತಾರಾಷ್ಟ್ರೀಯ ವಲಯದಲ್ಲಿ ಭಾರತದ ವರ್ಚಸ್ಸು ವೃದ್ಧಿಯಾಗಿದ್ದು, ಜಗತ್ತಿನ ಪ್ರಮುಖ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಂಬಂಧಗಳು ವೃದ್ಧಿಯಾಗಿವೆ. ಅಷ್ಟೇ ಅಲ್ಲ, ‘ಭಾರತ ನಮ್ಮ ಮಿತ್ರರಾಷ್ಟ್ರ’ ಎಂದು ಹೇಳಿಕೊಳ್ಳಲು ಅಭಿವೃದ್ಧಿ ಹೊಂದಿದ ದೇಶಗಳು ಹೆಮ್ಮೆ ಪಡುತ್ತಿವೆ. ಅಮೆರಿಕವಂತೂ ಮತ್ತೆ ಮತ್ತೆ ‘ಭಾರತ ನಮ್ಮ ಆತ್ಮೀಯ ಮಿತ್ರ’ ಎಂದು ಗಟ್ಟಿದನಿಯಲ್ಲಿ ಹೇಳುತ್ತಿದೆ. ರಷ್ಯಾ ನಮ್ಮ ದೇಶದಲ್ಲಿನ ಸುಧಾರಣೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದೆ. 2023ರಲ್ಲಿ ಭಾರತದಲ್ಲಿ ನಡೆದ ಜಿ-20 ಶೃಂಗಸಭೆಯ ಯಶಸ್ಸು ಕೂಡ ದೇಶದ ಬದಲಾದ ಚಿತ್ರಣಕ್ಕೆ ಸಾಕ್ಷಿ.
ರಾಜತಾಂತ್ರಿಕ ಸಂಬಂಧಗಳು ಸದೃಢವಾಗಿದ್ದರೆ ಕ್ಲಿಷ್ಟಕರ ಸನ್ನಿವೇಶಗಳನ್ನೂ ಸುಗಮವಾಗಿ ಪರಿಹರಿಸಬಹುದು ಎಂಬುದಕ್ಕೆ ಕತಾರ್ ಪ್ರಕರಣವೇ ಸಾಕ್ಷಿ. ಪ್ರಧಾನಿ ನರೇಂದ್ರ ಮೋದಿ ಅವರ ಕತಾರ್ ಭೇಟಿಗೆ (ಫೆ. 14) ಮುನ್ನವೇ ಆ ರಾಷ್ಟ್ರ ಭಾರತಕ್ಕೆ ಉತ್ತಮ ಉಡುಗೊರೆಯನ್ನು ನೀಡಿದೆ. ನಿರಪರಾಧಿಗಳಾಗಿದ್ದರೂ ಕಳೆದ ಮೂರೂವರೆ ವರ್ಷಗಳಿಂದ ಕತಾರ್ನಲ್ಲಿ ‘ಗಲ್ಲುಶಿಕ್ಷೆ’ಯ ಭೀತಿಯಲ್ಲಿ ದಿನದೂಡುತ್ತಿದ್ದ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಗಳು ಬಿಡುಗಡೆಗೊಂಡು ಸೋಮ ವಾರ ತಾಯ್ನಾಡಿಗೆ ಮರಳಿದ್ದಾರೆ. ಬೇಹುಗಾರಿಕೆ ಆರೋಪದಲ್ಲಿ 2022ರ ಆಗಸ್ಟ್ನಲ್ಲಿ ಬಂಧಿತರಾಗಿ ಕತಾರ್ನ ಸೆರೆಮನೆಯಲ್ಲಿದ್ದ ಭಾರತೀಯ ನೌಕಾ ಪಡೆಯ ಎಂಟು ನಿವೃತ್ತ ಅಧಿಕಾರಿಗಳನ್ನು ಕತಾರ್ ಸರ್ಕಾರ ಬಿಡುಗಡೆ ಮಾಡಿದ್ದು, ಅವರಲ್ಲಿ ಏಳು ಜನರು ಸ್ವದೇಶಕ್ಕೆ ಮರಳಿದ್ದಾರೆ. ಕತಾರ್ನ ನ್ಯಾಯಾಲಯ ಎಂಟೂ ಜನರಿಗೆ ವಿಧಿಸಿದ್ದ ಮರಣದಂಡನೆಯು ಕೇಂದ್ರ ಸರ್ಕಾರದ ಸತತ ರಾಜತಾಂತ್ರಿಕ ಪ್ರಯತ್ನಗಳಿಂದಾಗಿ ಜೈಲು ಶಿಕ್ಷೆಯಾಗಿ ಪರಿವರ್ತನೆಗೊಂಡಿತ್ತು. ಇದಾದ 46 ದಿನಗಳ ನಂತರ ಬಿಡುಗಡೆಯಾಗಿರುವ ಮಾಜಿ ಯೋಧರ ಕುಟುಂಬಗಳಲ್ಲಿ ಸಂತಸ ಮುಗಿಲು ಮುಟ್ಟಿದೆ.
‘ಮಾಜಿ ನೌಕಾಧಿಕಾರಿಗಳ ಪ್ರಕರಣದ ಕುರಿತು ಪ್ರಧಾನಿ ನರೇಂದ್ರ ಮೋದಿ ಖುದ್ದು ಆಸಕ್ತಿ ವಹಿಸಿ ನಿರಂತರವಾಗಿ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಭಾರತೀಯರು ಮರಳುವುದನ್ನು ಖಾತರಿಪಡಿಸುವ ಯಾವುದೇ ಕ್ರಮ ಕೈಗೊಳ್ಳಲು ಮೋದಿ ಹಿಂಜರಿಕೆ ತೋರಲಿಲ್ಲ’ ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿನಯ್ ಕ್ವಾತ್ರಾ ಹೇಳಿರುವುದು, ಈ ಪ್ರಕರಣ ಹಿಂದಿನ ರಾಜತಾಂತ್ರಿಕ ಪ್ರಯತ್ನಗಳ ತೀವ್ರತೆಗೆ ಸಾಕ್ಷಿಯಾಗಿದೆ. ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಗಳಿಗೆ ಮರುಜೀವ ಸಿಕ್ಕಿರುವುದಕ್ಕೆ ಭಾರತದ ಕಡೆಯಿಂದ ನಡೆದ ರಾಜತಾಂತ್ರಿಕ ಪ್ರಯತ್ನಗಳು, ವಿದೇಶಾಂಗ ಸಚಿವಾಲಯದ ಸಮರ್ಥ ವಾದ ಮಂಡನೆ ಪ್ರಮುಖ ಕಾರಣ. ಕತಾರ್ ಪ್ರಕರಣದಿಂದಾಗಿ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ವೃದ್ಧಿಸಿದಂತಾಗಿದೆ. ಅಲ್ಲದೆ, ಮುಂಬರುವ ದಿನಗಳಲ್ಲಿ ಭಾರತ ಮತ್ತು ಕತಾರ್ ನಡುವಿನ ಸ್ನೇಹವೂ ಮತ್ತಷ್ಟು ಬಲಗೊಳ್ಳಲಿದೆ ಎಂಬುದರಲ್ಲಿ ಅನುಮಾನವಿಲ್ಲ.