

ಕಡೂರು: ಕಡೂರಿನ ಮನೆಯಲ್ಲಿ ಹಾಡಹಗಲೇ ಗೃಹಿಣಿ ಕವಿತಾ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಆಕೆಯ ಪತಿ ದಂತವೈದ್ಯ ಡಾ. ರೇವಂತ್ ಶನಿವಾರ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಂಡಿಕೊಪ್ಪಲು ರೈಲ್ವೆ ಗೇಟ್ ಸಮೀಪ ಹಳಿಗಳ ಪಕ್ಕ ಡಾ. ರೇವಂತ್ ಶವ ದೊರೆತಿದೆ. ರೈಲು ಹಳಿಗಳ ಮಧ್ಯೆ ಕಾಲು ತುಂಡಾಗಿ ಬಿದ್ದಿದ್ದರೆ, ದೇಹ ಹೊರಕ್ಕೆ ಬಿದ್ದಿದೆ. ರೈಲ್ವೆ ಗೇಟ್ ಬಳಿ ಅವರ ಕಾರು ಕಂಡುಬಂದಿದೆ.
ಕವಿತಾ ಕೊಲೆ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಅಷ್ಟರಲ್ಲೇ ಈ ಘಟನೆ ನಡೆದಿದೆ ಎಂದು ಕಡೂರು ಎಸ್ಐ ವಿಶ್ವನಾಥ್ ತಿಳಿಸಿದ್ದಾರೆ.
ಪತ್ನಿ ಕವಿತಾ ಭೀಕರ ಕೊಲೆ: ಕಡೂರಿನ ಡಾ. ರೇವಂತ್ ಮನೆಯಲ್ಲಿ ಫೆ.17ರ ಅಪರಾಹ್ನ ಮನೆಯ ಕಾರ್ ಶೆಡ್ನಲ್ಲಿ ಪತ್ನಿ ಕವಿತಾಳ ಕತ್ತಿಗೆ ಚೂರಿ ಇರಿದು ಕೊಲೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಡಾ. ರೇವಂತ್ ಎಂದಿನಂತೆ ಬೀರೂರಿನಲ್ಲಿರುವ ತಮ್ಮ ಡೆಂಟಲ್ ಕ್ಲಿನಿಕ್ಗೆ ಹೋಗಿದ್ದರು. ಐದು ವರ್ಷದ ಪುತ್ರ ಆರ್ಯನ್ಗೆ ಜ್ವರ ಬಂದಿದ್ದರಿಂದ ಮಕ್ಕಳ ತಜ್ಞರಿಂದ ಚಿಕಿತ್ಸೆ ಕೊಡಿಸಲು ತಮ್ಮೊಂದಿಗೆ ಕರೆದೊಯ್ದಿದ್ದರು. ಮನೆಯಲ್ಲಿ ಪತ್ನಿ ಮತ್ತು ಏಳು ತಿಂಗಳ ಮಗು ಮಾತ್ರ ಇದ್ದರು. ಕವಿತಾ ಹತ್ಯೆ ಸಮಯದಲ್ಲಿ ಮಗು ಕೊಠಡಿಯಲ್ಲಿ ಆಟವಾಡಿಕೊಂಡಿತ್ತು ಎಂದು ಹೇಳಲಾಗಿತ್ತು.
ಮೇಲ್ನೋಟಕ್ಕೆ ಇದು ದರೋಡೆಗಾಗಿ ನಡೆದ ಕೃತ್ಯವೆಂಬಂತೆ ಕಾಣುತ್ತಿತ್ತು. ಕೈಗಳಿಗೆ ಗ್ಲೌಸ್ ಹಾಕಿಕೊಂಡು ಕೃತ್ಯವೆಸಗಲಾಗಿತ್ತು. ಕೃತ್ಯಕ್ಕೆ ಬಳಕೆ ಮಾಡಿದ ಆಯುಧವನ್ನೂ ದುಷ್ಕರ್ವಿುಗಳು ತೆಗೆದುಕೊಂಡು ಹೋಗಿದ್ದರು. ಕೊಲೆಗಾರ 160 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ಮತ್ತು ನಗದು ದೋಚಿದ್ದಾನೆ ಎಂದು ರೇವಂತ್ ಕುಟುಂಬ ಪೊಲೀಸರಿಗೆ ಮಾಹಿತಿ ನೀಡಿತ್ತು. ಬೆರಳಚ್ಚು ತಜ್ಞರು, ಶ್ವಾನ ದಳ ಪರಿಶೀಲನೆ ನಡೆಸಿತ್ತು. ಸ್ಥಳ ಪರಿಶೀಲಿಸಿದ ಎಸ್ಪಿ ಹರೀಶ್ ಪಾಂಡೆ, ಆರೋಪಿ ಚಾಣಾಕ್ಷತನದಿಂದ ಯಾವ ಸುಳಿವೂ ಬಿಡದೆ ಕೃತ್ಯವೆಸಗಿದ್ದಾನೆ ಎಂದು ತಿಳಿಸಿದ್ದರು. ಆದರೆ, ಈಗ ರೇವಂತ್ ಆತ್ಮಹತ್ಯೆ ಪ್ರಕರಣ ಮತ್ತಷ್ಟು ಸಂಶಯಗಳನ್ನು ಹುಟ್ಟುಹಾಕಿದೆ. ಕವಿತಾ ಉಡುಪಿಯ ಲಕ್ಷಿ್ಮೕನಗರದ ವನಜಮ್ಮ -ಬಸವರಾಜಪ್ಪ ದಂಪತಿ ಪುತ್ರಿ. ರೇವಂತ್ ಜತೆ 7 ವರ್ಷಗಳ ಹಿಂದೆ ಮದುವೆಯಾಗಿತ್ತು.
ಪತಿಯೇ ಹಂತಕ?
ಅಕ್ರಮ ಸಂಬಂಧ ಹೊಂದಿದ್ದ ಡಾ. ರೇವಂತ್ ತಾನೇ ಪತ್ನಿಯ ಕೊಲೆ ಮಾಡಿ ಪ್ರಕರಣದ ಹಾದಿ ತಪ್ಪಿಸಲು ದರೋಡೆ ನಾಟಕವಾಡಿರಬಹುದು. ಪತ್ನಿಗೆ ಇಂಜೆಕ್ಷನ್ ನೀಡಿ ಕತ್ತು ಸೀಳಿರುವುದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.