

ಬೆಂಗಳೂರು: ದಂತ ವೈದ್ಯರ ನಿರ್ಲಕ್ಷ್ಯದಿಂದ ರೋಗಿ ಸಾವನ್ನಪ್ಪಿದ ಸಂಬಂಧ ವೈದ್ಯರ ವಿರುದ್ಧ ಕೇಸ್ ದಾಖಲಿಸಿಲ್ಲ ಎಂದು ಆರೋಪಿಸಿ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆ ಎದುರು ಶವ ಇಟ್ಟು ಸಂಬಂಧಿಕರು ಸೋಮವಾರ ಪ್ರತಿಭಟನೆ ನಡೆಸಿದರು.
ರಾಜಾಜಿನಗರ ಎ ಬ್ಲಾಕ್ ನಿವಾಸಿ ಕುಮಾರ್ (55) ಮೃತಪಟ್ಟಿದ್ದು, ವೈದ್ಯ ಡಾ.ಸುನೀಲ್ ವಿರುದ್ಧ ಆರೋಪ ಬಂದಿದೆ. ಈ ಬಗ್ಗೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಚಿಕಿತ್ಸೆ ದೋಷಗಳ ಬಗ್ಗೆ ಮಾಹಿತಿ ಕೋರಿ ರಾಜ್ಯ ವೈದ್ಯಕೀಯ ಪರಿಷತ್‌ಗೆ ಪತ್ರ ಬರೆದಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಕುಮಾರ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಾಲಕ ಕುಮಾರ್, ಪತ್ನಿ, ಮಕ್ಕಳ ಜತೆ ರಾಜಾಜಿನಗರದ ಎ ಬ್ಲಾಕ್‌ನಲ್ಲಿ ನೆಲೆಸಿದ್ದರು. ಹಲ್ಲು ನೋವಿನ ಹಿನ್ನಲೆಯಲ್ಲಿ ಕೆಲ ದಿನಗಳ ಹಿಂದೆ ಸುಬ್ರಹ್ಮಣ್ಯನಗರದ ವೈದ್ಯ ಡಾ. ಸುನೀಲ್, ದಂತ ಕ್ಲಿನಿಕ್‌ಗೆ ಹೋಗಿ ಚಿಕಿತ್ಸೆಗೆ ಪಡೆದಿದ್ದರು. 10 ದಿನಗಳ ಬಳಿಕ ಕುಮಾರ್, ಮುಖ ಊದಿಕೊಂಡಿತು. ಕೂಡಲೇ ಮನೆ ಸಮೀಪದ ಖಾಸಗಿ ಆಸ್ಪತ್ರೆಗೆ ಕುಟುಂಬ ಸದಸ್ಯರು ದಾಖಲಿಸಿದ್ದರು.
ಚಿಕಿತ್ಸೆ ಫಲಿಸದೆ ಸೋಮವಾರ ಮೃತಪಟ್ಟಿದ್ದಾರೆ. ಈ ಸಾವಿಗೆ ವೈದ್ಯರ ನಿರ್ಲಕ್ಷ್ಯತನ ಕಾರಣ ಎಂದು ಕುಟುಂಬದವರು ಆರೋಪಿಸಿ ವೈದ್ಯರ ವಿರುದ್ಧ ಸುಬ್ರಹ್ಮಣ್ಯನಗರ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಆದರೆ, ಪೊಲೀಸರು ನಿರಾಕರಿಸಿದರು ಎಂದು ಕೆರಳಿದ ಸಂಬಂಧಿಕರು, ಕೆಲಕಾಲ ಠಾಣೆ ಮುಂದೆ ಶವ ಇಟ್ಟು ಪ್ರತಿಭಟನೆ ನಡೆಸಿದರು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಮಲ್ಲೇಶ್ವರ ಉಪ ವಿಭಾಗ ಎಸಿಪಿ ಕೃಷ್ಣಮೂರ್ತಿ, ಪ್ರಕರಣದ ಕುರಿತು ಕಾನೂನುಬದ್ಧ ತನಿಖೆ ನಡೆಸಲಾಗುತ್ತದೆ ಎಂದು ಭರವಸೆ ನೀಡಿದರು. ಕೊನೆಗೆ ಮೃತ ಕುಮಾರ್ ಸಂಬಂಧಿಕರು ಪ್ರತಿಭಟನೆ ಹಿಂಪಡೆದು ತೆರಳಿದರು.