

ಒಲವಿನ ಹಂದರದ ನೆರಳಿಗೆ ಎಲ್ಲರನ್ನೂ ಕೂಗಿ ಕರೆದು, ದ್ವಂದ್ವ- ವೈರುಧ್ಯಗಳಂತಹ ಪೈಶಾಚಿಕ ಕಹಿ ಸಂಗತಿಗಳ ಮರೆತು ಹೊಸ ಭಾವ ಸಿಂಚನದ ಸಿಹಿ ಸ್ನೇಹ ದೀಕ್ಷೆಯನ್ನು ಹೊಂದುವುದೇ ಯುಗಾದಿ ಸಂಭ್ರಮಾಚರಣೆಯ ಮೂಲ ಆಶಯ. ಭಾರತೀಯರ ಪಾಲಿಗೆ ಯುಗಾದಿಯೇ ನಿಜವಾದ ಹೊಸ ವರ್ಷ ಹಾಗೂ ಹೊಸ ವರ್ಷಾಚರಣೆಯ ದಿನವೂ ಕೂಡ. ಆದರೆ ಈ ಹೊಸ ವರ್ಷ ಆರಂಭಗೊಳ್ಳುವುದು ಸೂರ್ಯೋದಯದ ಹೊಂಗಿರಣಗಳ ಪ್ರಫುಲ್ಲತೆಯಿಂದ ಎನ್ನುವುದೇ ವೈಶಿಷ್ಟ್ಯ. ಹೊಸ ಸಂವತ್ಸರದೊಂದಿಗೆ ಋತುಗಳ ರಾಜನಾದ ‘ವಸಂತ’ದ ಬೆನ್ನೇರಿ ಬರುವ ಚೈತ್ರ ಮಾಸದ ಮೊದಲ ದಿನದ ಈ ಯುಗಾದಿ ಹಬ್ಬವು ಪರಿಸರದ ಹಸಿರು ಸಿಂಚನಕ್ಕೆ ಸಾಕ್ಷಿ ನುಡಿಯುತ್ತದೆ. ನಿಸರ್ಗದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಯಾರಿಗೇ ಆದರೂ ಯುಗಾದಿಯ ಸಂಭ್ರಮ ಖುಷಿಕೊಡದೇ ಇರದು.
ಹಸಿರು ಚಿಗುರನು ಹೊತ್ತು ನಳನಳಿಸುವ ಅಖಂಡ ಸಸ್ಯ ಸಂಕುಲವು ಕಣ್ಣಿಗೆ ತಂಪು ತುಂಬದೇ ಇರದು. ಎಲ್ಲೆಡೆ ಹಸಿರಿನ ಚಿಗುರು ಪಲ್ಲವಿಸಲು ತೆರೆದುಕೊಂಡ ಅಖಂಡ ಪರಿಸರವನ್ನು ದರ್ಶಿಸಿದ ನಮ್ಮ ಕನ್ನಡದ ಕವಿಗಳು ಯುಗಾದಿಯನ್ನು ಕಂಡ ಬಗೆಯೇ ಅಪೂರ್ವವಾದುದು. ನಿಸರ್ಗದ ಹಸಿರು ತೋರಣವನ್ನು ಕಂಡು ನಮ್ಮ ಕವಿವರ್ಯರು ತಮ್ಮ ಶಬ್ದಾಂತರಂಗದಲ್ಲಿ ಅದನ್ನು ಹೃದ್ಯವಾಗಿ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಭಾರತೀಯ ಮಣ್ಣಿನ ಕಣಗಳು ಸ್ನೇಹಿತರನ್ನು ಕೂಡಿ, ಶತ್ರುಗಳನ್ನು ಕಳೆದು, ಪ್ರೀತಿಯನ್ನು ಗುಣಿಸಿ, ದುಃಖವನ್ನು ಭಾಗಿಸಬೇಕೆಂದು ಉಗ್ಗಡಿಸುವ ಹೃದ್ಯ ಭಾವತನ್ಮಯತೆಯ ಸಂದೇಶ ವಿಶ್ವತೋಮುಖವಾದದ್ದು. ಇದಕ್ಕೆ ಭಾರತೀಯ ಹಬ್ಬಗಳೂ ತೆರೆದುಕೊಂಡಿವೆ. ಈ ನಿಟ್ಟಿನಲ್ಲಿ ಕನ್ನಡ ಕಾವ್ಯಾಕ್ಷಿ ಕಂಡರಿದ ಯುಗಾದಿಯು ಹಬ್ಬಗಳ ಹಿಂದಿರುವ ಹದುಳ ಆಶಯಗಳನ್ನು ತೆರೆದಿಡುತ್ತದೆ.
ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಡಾ. ಕೆ.ವಿ. ಪುಟ್ಟಪ್ಪ (ಕುವೆಂಪು) ಅವರ ದೃಷ್ಟಿಯಲ್ಲಿ ಯುಗಾದಿಯನ್ನು ಕಂಡ ರೀತಿ ಅತ್ಯಂತ ಮನೋಜ್ಞವಾದದ್ದು. ಅದು ವಿಶ್ವಬಂಧುತ್ವವನ್ನು ಬಯಸುತ್ತದೆ. ಪ್ರತಿ ಹೊಸ ಸಂವತ್ಸರವನ್ನು ಇಹದ ಹಗೆಯನ್ನು ಮರೆತು ಎಲ್ಲರನ್ನೂ ಪ್ರೀತಿಸುವ ಹದುಳ ಹಂಬಲಕ್ಕೇ ತೆರೆದುಕೊಳ್ಳಲು ಮೀಸಲಿರಿಸಬೇಕೆಂದು ಕುವೆಂಪು ಬಯಸುತ್ತಾರೆ.
ತೊಲಗಲಿ ದುಃಖ ತೊಲಗಲಿ ಮತ್ಸರಪ್ರೇಮಕೆ ಮೀಸಲು ನವ ಸಂವತ್ಸರನಮ್ಮೆದೆಯಲ್ಲಿದೆ ಸುಖನಿಧಿ ಎಂದುಹೊಸ ಹೂಣಿಕೆಯನು ತೊಡಗಿಂದು
ಎಂದು ಹೇಳಿರುವುದನ್ನು ಅವಲೋಕಿಸಿದಾಗ, ಇಲ್ಲಿ ಸಮಷ್ಟಿ ಚಿಂತನೆಯೇ ಮೈದಾಳಿದೆ. ಪ್ರತಿ ವರುಷದ ಯುಗಾದಿಯು ಸಮಸ್ತ ಮನುಕುಲದ ದುಃಖವನ್ನು ದೂರ ಮಾಡುವಂತಾಗಲಿ. ಜೊತೆಗೆ ನಮ್ಮೊಳಗಿನ ದ್ವಂದ್ವ- ವೈರುಧ್ಯದ ಸಂಕೀರ್ಣತೆ, ಮದ- ಮತ್ಸರದ ಕುಬ್ಜ ನಿಲುವುಗಳೂ ಸನಿಹ ಸುಳಿಯದಂತೆ ಬಹುದೂರ ತೊಲಗಿ ಹೋಗಲಿ, ನಮ್ಮೆದೆಯ ಗೂಡಿನಲ್ಲಿ ಸುಖ-ಸಂತಸದ ಸಂಪತ್ತನ್ನು ಹೊಂದಲು ಯುಗಾದಿಯ ಸಂದರ್ಭದಲ್ಲಿ ಹೊಸ ಸಂಕಲ್ಪ ಮಾಡಲು ಆಶಿಸುವ ಕುವೆಂಪು ಅವರು ಯುಗಾದಿ ಹಬ್ಬದ ಆಚರಣೆಯಲ್ಲಿಯೂ ತಮ್ಮ ವಿಶ್ವಮಾನವ ಸಂದೇಶವನ್ನು ಮರೆತಿಲ್ಲ.
ಕನ್ನಡ ವಾಜ್ಞಯ ಲೋಕದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹೆಮ್ಮೆಯ ವರಕವಿ ಡಾ.ದ.ರಾ. ಬೇಂದ್ರೆ ಅವರ ದೃಷ್ಟಿಯಲ್ಲಿ ಯುಗಾದಿ ಬಹು ವಿಸõತವಾದದ್ದು. ಎಲ್ಲ ಹಳಸಲು ವಿಚಾರಗಳಿಂದ ಹೊರಬಂದು ಪ್ರತಿ ಯುಗಾದಿಯನ್ನೂ ಹೊಸತನದಿಂದ ಕಾಣಲು ವರಕವಿ ಕರೆ ನೀಡಿದ್ದಾರೆ.
ಯುಗ ಯುಗಾದಿ ಕಳೆದರೂಯುಗಾದಿ ಮರಳಿ ಬರುತಿದೆಹೊಸ ವರುಷಕೆ ಹೊಸ ಹರುಷವಹೊಸತು ಹೊಸತು ತರುತಿದೆ
ಯುಗಾದಿಯ ಮಹತ್ವವನ್ನು ಎತ್ತಿ ಹಿಡಿಯುವ ಡಾ. ಬೇಂದ್ರೆ ಅವರ ಈ ಕವಿತೆ ಅತ್ಯಂತ ಜನಪ್ರಿಯ. ಸಮೂಹ ಮಾಧ್ಯಮಗಳಲ್ಲಿ, ಅದರಲ್ಲೂ ಮುಖ್ಯವಾಗಿ ಆಕಾಶವಾಣಿಯಲ್ಲಂತೂ ಪ್ರತಿವರ್ಷದ ಪರಿಸರದ ಹಸಿರು ಸಂಭ್ರಮದ ಹಬ್ಬ ಯುಗಾದಿ ಸಂದರ್ಭದಲ್ಲಿ ಈ ಹಾಡು ಅನುರಣಿಸದೇ ಇರದು. ಎಷ್ಟೇ ಯುಗಾದಿಗಳು ಕಳೆದಿದ್ದರೂ ಪ್ರತಿ ಯುಗಾದಿಯೂ ತುಂಬಿ ತರುವ ಹರುಷದ ಹೊನಲು ನವನವೀನವಷ್ಟೇ ಅಲ್ಲ; ಅದು ಅಪರೂಪವಾದುದು ಮತ್ತು ಅಸಾಮಾನ್ಯವಾದುದು. ಅದು ಹೊಸ ವರುಷದ ಎಲ್ಲ ಹರುಷದ (ಸಂತಸದ) ಕ್ಷಣಗಳನ್ನೂ ಹಗ್ಗ ಹೊಸೆದಂತೆ ಹೊಸೆದು ತರುತ್ತದೆ ಎನ್ನುವ ಬೇಂದ್ರೆ ಅವರ ಭಾವಸಿಂಚನದಲ್ಲಿ ಹಬ್ಬದ ಸಡಗರವೂ ಮೇಳೈಸಿರುವ ಜನಪರ ನೆಲೆ ಗಮನಸೆಳೆಯುತ್ತದೆ. ಯುಗಾದಿ ಹಬ್ಬದ ಹರವನ್ನು ಡಾ. ಬೇಂದ್ರೆ ಅವರು ವ್ಯಾಪಕ ಭಾವತನ್ಮಯತೆಯೊಂದಿಗೆ ಆಳ ಅವಲೋಕನ ಮಾಡಿದ್ದು ಕನ್ನಡ ವಾಜ್ಞಯ ವಿಹಾರದಲ್ಲಿ ಎದ್ದು ಕಾಣುತ್ತದೆ. ಬೇಂದ್ರೆ ಅವರ ದೃಷ್ಟಿಯಲ್ಲಿ ನಿಸರ್ಗ, ಮನುಕುಲದ ಬದುಕು ಮತ್ತು ಅಧ್ಯಾತ್ಮದ ತೌಲನಿಕ ದೃಷ್ಟಿ ಅನನ್ಯವಾದದ್ದು. ಈ ಸಾಲುಗಳಲ್ಲಿ ತುಂಬಿಕೊಂಡಿರುವ ಕಾವ್ಯಾನುಸಂಧಾನವು ಅವರು ವರಕವಿಗಳೆಂಬುದನ್ನು ಸಾಕ್ಷೀಕರಿಸುತ್ತದೆ.
ವರುಷಕೊಂದು ಹೊಸತು ಜನ್ಮಹರುಷಕೊಂದು ಹೊಸತು ನೆಲೆಯುಅಖಿಲ ಜೀವಜಾತಕೆ !ಒಂದೇ ಒಂದು ಜನ್ಮದಲ್ಲಿಒಂದೇ ಬಾಲ್ಯ ಒಂದೇ ಹರೆಯನಮಗದಷ್ಟೇ ಏತಕೋ?
ಡಾ.ದ.ರಾ. ಬೇಂದ್ರೆ ಅವರೊಳಗಿದ್ದ ಉತ್ಕಟ ಜೀವನ ಪ್ರೀತಿ ಇಲ್ಲಿ ಎದ್ದುಕಾಣುತ್ತದೆ. ನಿಸರ್ಗದ ಎಲ್ಲ ತರು-ಲತೆಗಳ ಒಣಗಿದ ಎಲೆಗಳು ಉದುರಿ ಹಸಿರು ಚಿಗುರೆಲೆಗಳು ಎದ್ದು ಕಾಣುವ ಜೊತೆಗೆ ಪ್ರತಿ ಯುಗಾದಿಯ ಸಂದರ್ಭದಲ್ಲಿಯೂ ಅಖಂಡ ಪರಿಸರಕ್ಕೆ ಹೊಸತು ಬಾಲ್ಯ ಮತ್ತು ಹೊಸ ಚಿಗುರು- ಚೈತನ್ಯದ ಯೌವನ ಪ್ರಾಪ್ತವಾಗುತ್ತದೆ. ಆದರೆ ಇದೇ ನಿಸರ್ಗದ ಮಡಿಲಲ್ಲಿಯೇ ಜನಿಸಿ ಜೀವಿಸುವ ಮಾನವನಿಗೆ ಮಾತ್ರ ಒಂದೇ ಜನನ, ಒಂದೇ ಬಾಲ್ಯ ಹಾಗೂ ಒಂದೇ ಯೌವನ ಲಭಿಸಿರುವುದನ್ನು ಕವಿ ಮನವು ಇಲ್ಲಿ ಆಕ್ಷೇಪಿಸುತ್ತದೆ. ಈ ಕವಿತೆಯ ಕೊನೆಯ ಸಾಲುಗಳು ಓದುಗರನ್ನು ಹಿಡಿದಿಡುತ್ತವೆ.ಬೇವಿನ ಕಹಿ ಬಾಳಿನಲಿಹೂವಿನ ನಸುಗಂಪು ಸೂಸಿಜೀವಕಳೆಯ ತರುತಿದೆ...
ಅಖಂಡ ವಿಶ್ವದ ಸಸ್ಯ ಸಂಕುಲದಂತೆ ಮಾನವರೂ ಯುಗಾದಿಯ ಹಸಿರು ಸಂಭ್ರಮದಲ್ಲಿ ಕಹಿ ಮರೆತ ಹೊಸ ಬದುಕನ್ನು, ಹೊಸ ಉತ್ಸಾಹದ ಸಿಹಿ ಜೀವನ ವಿಧಾನವನ್ನು, ಹೊಸ ಬಾಲ್ಯ ಮತ್ತು ಯೌವನವದ ಚೆಲುವನ್ನು ಹೊಂದಬೇಕೆನ್ನುವ ಚಿಂತನೆಯಲ್ಲಿ ವ್ಯಷ್ಟಿ ಯನ್ನಳಿದು ಸಮಷ್ಟಿಯ ಅನುಸಂಧಾನಕ್ಕೆ ಅಣಿಯಾಗಲು ವರಕವಿ ಡಾ. ಬೇಂದ್ರೆ ಬಯಸುತ್ತಾರೆ.