ರಾಜೀನಾಮೆಗೂ ಮುನ್ನ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಕೊಟ್ಟ ಯಡಿಯೂರಪ್ಪ! ಕೊನೇ ಕ್ಷಣದಲ್ಲಿ ಅಧಿಕೃತ ಆದೇಶ

bsy
Published on

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಗೂ ಮುನ್ನ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳಗೊಳಿಸಿ ಬಿ.ಎಸ್. ಯಡಿಯೂರಪ್ಪ ಅಧಿಕೃತ ಆದೇಶ ಹೊರಡಿಸಿದ್ದು, ಆ ಮೂಲಕ ನೌಕರರಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಕರೊನಾ ಕಾರಣಕ್ಕೆ 2020ರ ಜನವರಿಯಿಂದ ತುಟ್ಟಿಭತ್ಯೆ ತಡೆ ಹಿಡಿದ ಪರಿಣಾಮ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಕಳೆದ ಮೂರು ಕಂತುಗಳ ತುಟ್ಟಿಭತ್ಯೆ ಲಭ್ಯವಾಗಿರಲಿಲ್ಲ. ಅಖಿಲ ಭಾರತ ಸೂಚ್ಯಂಕ ಆಧರಿಸಿ ಕೇಂದ್ರ ಸರ್ಕಾರ ಕಳೆದ ವಾರ ತನ್ನ ನೌಕರರ ಶೇ.11ರಷ್ಟು ತುಟ್ಟಿಭತ್ಯೆ ಘೋಷಣೆ ಮಾಡಿತ್ತು. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಮಂಜೂರು ಮಾಡಬೇಕೆಂಬ ಬೇಡಿಕೆ ಇತ್ತು.

ಈ ಮನವಿಗೆ ಸ್ಪಂದಿಸಿದ್ದ ಯಡಿಯೂರಪ್ಪ ಅವರು ಅಧಿಕಾರ ಪದತ್ಯಾಗ ಮಾಡುವ ಕೊನೇ ಕ್ಷಣದಲ್ಲಿ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ. 11.25ರಿಂದ 12.50ಕ್ಕೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದಾರೆ.

ಸರ್ಕಾರಿ ನೌಕರರು, ನಿಗಮ ಮಂಡಳಿ ನೌಕರರು, ಪಿಂಚಣಿದಾರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಿರುವುದರಿಂದ ಸರ್ಕಾರಕ್ಕೆ 250 ಕೋಟಿ ರೂ. ಹೊರೆ ಬೀಳುತ್ತಾದರೂ 6 ಲಕ್ಷ ಸರ್ಕಾರಿ ನೌಕರರು, 3 ಲಕ್ಷ ನಿಗಮ ಮಂಡಳಿ ನೌಕರರು, 4.50 ಲಕ್ಷ ಪಿಂಚಣಿದಾರರಿಗೆ ಅನುಕೂಲ ಆಗಲಿದೆ. ಜು.1ರಿಂದ ಮಂಜೂರಾಗುವ ತುಟ್ಟಿಭತ್ಯೆ ಮೂಲ ವೇತನದಲ್ಲಿ ಸೇರ್ಪಡೆಗೊಳ್ಳಲಿದೆ.

ಡಿಎ ಹೆಚ್ಚಳದ ಲೆಕ್ಕಾಚಾರ: ಸರಾಸರಿ 50-60 ಸಾವಿರ ವೇತನ ಪಡೆಯುವ ನೌಕರರ ಸಂಖ್ಯೆ ಹೆಚ್ಚಿದ್ದು, ಅವರಿಗೆ 5-6 ಸಾವಿರ ಹೆಚ್ಚಾಗಲಿದೆ. ಒಂದು ಲಕ್ಷ ಪಡೆಯುವವರಿಗೆ 10 ಸಾವಿರ ಅಧಿಕವಾಗಲಿದೆ. ನಿವೃತ್ತ ನೌಕರರಿಗೆ ಸರಾಸರಿ 2.5 ಸಾವಿರದಿಂದ 4 ಸಾವಿರ ರೂ.ವರೆಗೆ ಪಿಂಚಣಿ ಹೆಚ್ಚಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net