ರಸ್ತೆಗುಂಡಿ ತಪ್ಪಿಸುವಾಗ ಆಯತಪ್ಪಿ ಬಿದ್ದ ದಂಪತಿ, ಶಾಲಾ ವಾಹನ ಹರಿದು ಗೃಹಿಣಿ ಸ್ಥಳದಲ್ಲೇ ಸಾವು; ಸಾರ್ವಜನಿಕರ ಆಕ್ರೋಶ

accident-15
Published on

ಬೆಂಗಳೂರು : ರಸ್ತೆ ಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನದಲ್ಲಿ ಕೆಳಗೆ ಬಿದ್ದ ಗೃಹಿಣಿ ಮೇಲೆ ಶಾಲಾ ವಾಹನ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಾಗಡಿ ರಸ್ತೆ ಸಮೀಪದ ಶ್ರೇಯಾ ಲೇಔಟ್ ನಿವಾಸಿ ಸುಮಂಗಲ (58) ಮೃತ ಗೃಹಿಣಿ. ಗುರುವಾರ ಚಿಕ್ಕಗೊಲ್ಲರಹಟ್ಟಿಯಲ್ಲಿ ದ್ವಿಚಕ್ರ ವಾಹನದಲ್ಲಿ ಪತಿ ಶರಣಪ್ಪ ಜೊತೆಯಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದಾವಣಗೆರೆ ಮೂಲದ ಮೈಕೋ ಕಾರ್ಖಾನೆಯ ನಿವೃತ್ತ ಕಾರ್ಮಿಕ ಶರಣಪ್ಪ, ಪತ್ನಿ ಸುಮಂಗಲ ಅವರೊಂದಿಗೆ ಶ್ರೇಯಾ ಲೇಔಟ್‌ನಲ್ಲಿ ನೆಲೆಸಿದ್ದರು. ದ್ವಿಚಕ್ರ ವಾಹನದಲ್ಲಿ ದಿನಸಿ ತರಲು ದಂಪತಿ ಸುಂಕದಕಟ್ಟೆಗೆ ತೆರಳುತ್ತಿದ್ದರು. ಚಿಕ್ಕಗೊಲ್ಲರಹಟ್ಟಿ ಶನಿಮಹಾತ್ಮ ದೇವಸ್ಥಾನ ಬಳಿ ಗುಂಡಿ ತಪ್ಪಿಸಲು ಹೋಗಿ ಆಯತಪ್ಪಿ ದ್ವಿಚಕ್ರ ವಾಹನ ಸಮೇತ ಶರಣಪ್ಪ ದಂಪತಿ ರಸ್ತೆಗೆ ಬಿದ್ದಿದ್ದರು.

ಹಿಂದಿನಿಂದ ವೇಗವಾಗಿ ಬಂದ ಶಾಲಾ ವಾಹನ ಸಮಂಗಲ ತಲೆ ಮೇಲೆ ಹರಿದ ಪರಿಣಾಮ ಗೃಹಿಣಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶರಣಪ್ಪಗೆ ಸಣ್ಣಪುಟ್ಟ ಗಾಯವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕ ಶಾಲಾ ವಾಹನ ಬಿಟ್ಟು ಪರಾರಿಯಾಗಿದ್ದಾನೆ.

ಕಣ್ಣೆದುರಿಗೆ ಪ್ರಾಣ ಕಳೆದುಕೊಂಡ ಪತ್ನಿಯ ಶವದ ಮುಂದೆ ಪತಿ ಶರಣಪ್ಪ ರೋದಿಸುತ್ತಿದ್ದ ದೃಶ್ಯ ಹೃದಯವಿದ್ರಾವಕವಾಗಿತ್ತು. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೂರ್ಣವಾಗದ ಕಾಮಗಾರಿ :

2019ರಲ್ಲಿ ಮಾಗಡಿ ರಸ್ತೆಯ ನೈಸ್ ಜಂಕ್ಷನ್‌ನಿಂದ ಮಾಗಡಿ ತನಕ ಚತುಷ್ಪತ ರಸ್ತೆಯನ್ನು ಅಭಿವೃದ್ಧಿಪಡಿಸುವ ಕಾಮಗಾರಿಯನ್ನು ಕೈಗೊಂಡಿತ್ತು. 4 ವರ್ಷ ಕಳೆದರು ರಸ್ತೆ ಕಾಮಗಾರಿ ಪೂರ್ಣವಾಗಿಲ್ಲ. ಅರೆಬರೆ ಕಾಮಗಾರಿ ನಡೆಸಿರುವ ಕಾರಣ ರಸ್ತೆಯಲ್ಲಿ ಆಳುದ್ದದ ಗುಂಡಿಗಳು ಬಿದ್ದು ಅಪಘಾತಗಳು ಸಂಭವಿಸಿ ಹತ್ತಾರು ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಶನಿವಾರವಷ್ಟೇ ಟಿಪ್ಪರ್ ಹರಿದು ಇದೇ ಸ್ಥಳದಲ್ಲೇ ಬೈಕ್ ಸವಾರ ಮೃತಪಟ್ಟಿದ್ದ. ಇದರಿಂದ ಜನರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಪಘಾತ ಮಾಸುವ ಮುನ್ನವೇ ಗೃಹಿಣಿ ಸುಮಂಗಲ ರಸ್ತೆ ಗುಂಡಿಗೆ ಬಲಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net