

ಕಲಬುರಗಿ: ಕರೊನಾ ಸೋಂಕಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ಅದಕ್ಕೆ ಕಾರಣ ಕಾಂಗ್ರೆಸ್. ಸೋಂಕು ಹರಡುವಿಕೆ ಮತ್ತು ಸಾವಿಗೂ ಕಾಂಗ್ರೆಸ್ಸೇ ಹೊಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದರು.
ಸುದ್ದಿಗಾರರೊಂದಿಗೆ ಇಂದು(ಶುಕ್ರವಾರ) ಮಾತನಾಡಿದ ನಳೀನ್ ಕುಮಾರ್, ಲಸಿಕೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಕುರಿತು ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ಸತ್ಯದಿಂದ ಕೂಡಿದೆ. ವ್ಯಾಕ್ಸಿನ್ ವಿಚಾರದಲ್ಲಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನ ಕಾಂಗ್ರೆಸ್ ಮಾಡಿದೆ. ವ್ಯಾಕ್ಸಿನ್ ತಗೊಂಡ್ರೆ ಷಂಡತನ ಬರುತ್ತೆ ಅಂದ್ರು, ಬಿಜೆಪಿ ಲಸಿಕೆ ಅಂದ್ರು, ಮೋದಿ ಲಸಿಕೆ ಅಂದ್ರು. ಕಾಂಗ್ರೆಸ್ನ ಅಪಹಾಸ್ಯದಿಂದಾಗಿ ಜನ ಭಯಭೀತರಾಗಿ ವ್ಯಾಕ್ಸಿನ್ನಿಂದ ದೂರ ಉಳಿದರು ಎಂದು ಆಕ್ರೋಶ ಹೊರ ಹಾಕಿದರು.
ಫೆಬ್ರುವರಿಯಲ್ಲಿ ಸ್ವತಃ ಪ್ರಧಾನಿಯವರೇ ಲಸಿಕೆ ತಗೊಂಡು ಜನರಿಗೆ ಪ್ರೇರಣೆ ನೀಡಿದರು. ಆದರೂ ಜನ ಮೇ ವರೆಗೂ ಲಸಿಕೆಗಾಗಿ ಮುಂದೆ ಬರಲಿಲ್ಲ. ಈಗ ಅದೇ ಕಾಂಗ್ರೆಸ್ಸಿಗರು ಲಸಿಕೆ ಇಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ. ಇದು ಕಾಂಗ್ರೆಸ್ನ ಚಿಲ್ಲರೆ ರಾಜಕಾರಣ. ಇಂತಹದ್ದು ಸರಿಯಲ್ಲ. ಸಿದ್ರಾಮಣ್ಣನೂ ಇದಕ್ಕೆ ಹೊರತಿಲ್ಲ, ಹೈಕಮಾಂಡ್ ಏನು ಮಾಡುತ್ತೋ ಸಿದ್ರಾಮಣ್ಣ ಸಹ ಅದನ್ನೇ ಮಾಡ್ತಾರೆ. ಅಧಿಕಾರಕ್ಕೋಸ್ಕರ ಈ ರೀತಿಯ ವರ್ತನೆಯನ್ನ ಜನ ಸಹಿಸೋದಿಲ್ಲ. ಅದಕ್ಕಾಗಿ ಜನ ಅವರನ್ನು ವರುಣಾ ಕ್ಷೇತ್ರದಿಂದ ಓಡ್ಸಿದ್ದಾರೆ. ಇದೇ ರೀತಿ ಮಾಡಿದ್ರೆ ಬಾದಾಮಿಯಿಂದಲೂ ಓಡಿಸ್ತಾರೆ ಎಂದು ನಳೀನ್ ಕುಮಾರ್ ಕಟೀಲ್ ಲೇವಡಿ ಮಾಡಿದರು.