

ಕಲಬುರಗಿ: ಕರೊನಾ ಲಸಿಕೆ ಹಾಕಿಸಿಕೊಳ್ಳಲು ರಾಜ್ಯದ ಕೆಲವು ಗ್ರಾಮಗಳಲ್ಲಿ ಜನ ಹಿಂದೇಟು ಹಾಕುತ್ತಿದ್ದಾರೆ. ತಾಂಡಾ, ಹಾಡಿಯಲ್ಲಿನ ಬಹುತೇಕರು ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ. ಹಾಗಾಗಿ ಇನ್ಮುಂದೆ ಅವರಿರುವಲ್ಲಿಗೇ ಹೋಗಿ ಲಸಿಕೆ ಹಾಕುವ ನಿಟ್ಟಿನಲ್ಲಿ ಈ ಬಸ್ಗಳು ಸಂಚರಿಸಲಿವೆ.
ಕೋವಿಡ್ ಲಸಿಕಾ ವಾಹನವನ್ನು ಕಲಬುರಗಿಯಲ್ಲಿ ಪ್ರಾರಂಭಿಸಲು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ತಯಾರಿ ನಡೆಸಿದ್ದು, ಲೋಕಾರ್ಪಣೆಗೆ ಎರಡು ಸಂಚಾರಿ ಲಸಿಕಾ ಬಸ್ ಸಿದ್ಧಗೊಂಡಿವೆ. ಇದು ರಾಜ್ಯದ ಮೊದಲ ಕೋವಿಡ್ ಲಸಿಕಾ ಸಂಚಾರಿ ಬಸ್ ಅನ್ನಿಸಿಕೊಳ್ಳಲಿದೆ.
ಗ್ರಾಮೀಣ ಭಾಗ ಹಾಗೂ ತಾಂಡಾಗಳಲ್ಲಿ ವಾಸಿಸುವ ಜನರಿಗಾಗಿಯೇ ಸಂಚಾರಿ ಲಸಿಕಾ ಬಸ್ ಸಿದ್ಧಪಡಿಸಲಾಗಿದೆ. ಈ ಬಸ್ ಮೂರು ವಿಭಾಗ ಹೊಂದಿದ್ದು, ಮೊದಲನೇ ವಿಭಾಗದಲ್ಲಿ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಎರಡನೇ ವಿಭಾಗದಲ್ಲಿ ಲಸಿಕೆ ಹಾಕುವುದು, ಕೊನೆಯ ವಿಭಾಗದಲ್ಲಿ ಲಸಿಕೆ ಪಡೆದ ನಂತರದ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಕೋರಿಕೆಯಂತೆ 2 ಬಸ್ ಅನ್ನು ಈಶಾನ್ಯ ಸಾರಿಗೆ ಸಂಸ್ಥೆ ತಯಾರಿಸಿದ್ದು, ಅಗತ್ಯವಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರಿ ಲಸಿಕಾ ವಾಹನ ತಯಾರಿಸಲಾಗುವುದು ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರೂ ಆದ ಸೇಡಂ ಶಾಸಕ ರಾಜಕುಮಾರ ತೆಲ್ಕೂರ್ ತಿಳಿಸಿದ್ದಾರೆ. ಕೆಲ ಕುಗ್ರಾಮಗಳಲ್ಲಿ ಆಸ್ಪತ್ರೆಗಳಿಲ್ಲ. ಅಲ್ಲಿಗೂ ಈ ಬಸ್ ಮೂಲಕ ಲಸಿಕೆ ಹಾಕುವ ಕಾರ್ಯ ನಡೆಯಲಿದೆ ಎಂದಿದ್ದಾರೆ.