

ರಾಯಚೂರು: ನನಗೆ ಕಣ್ಣು ಕಾಣಿಸಲ್ಲ, ನಾನು ಸತ್ರೂ ಕರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳಲ್ಲ... ಕರೊನಾ ಲಸಿಕೆ ಹಾಕಿಸಿಕೊಂಡ್ರೆ ಜ್ವರ ಬರುತ್ತೆ, ಸತ್ತೋಗ್ತೀನಿ... ಎಂದು ಅಜ್ಜಿ ರಂಪಾಟ ಮಾಡಿದ್ರೆ, ಅತ್ತ ಮನೆ ಬಾಗಿಲಿನಿಂದಾಚೆಗೂ ಬಾರದೆ ಒಳಗೇ ನಿಂತ ಯುವತಿ ವ್ಯಾಕ್ಸಿನ್ ಹಾಕಿಸಿಕೊಳ್ಳಲ್ಲ ಎಂದು ಪಟ್ಟು ಹಿಡಿದ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.
ಕರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಅಜ್ಜಿ ಮತ್ತು ಯುವತಿಗೆ ಶಾಲಾ ಶಿಕ್ಷಕರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಪರಿಪರಿಯಾಗಿ ಕೇಳಿಕೊಂಡರೂ ಒಪ್ಪಲೇ ಇಲ್ಲ. ದೇವದುರ್ಗ ತಾಲೂಕಿನ ಬುಂಕಲದೊಡ್ಡಿಯಲ್ಲಿ ಅಜ್ಜಿಯ ಮನೆ ಬಾಗಿಲಿಗೆ ಹೋಗಿ ಎಷ್ಟೇ ಮನವೊಲಿಸಿದ್ರೂ ಒಪ್ಪದ ಅಜ್ಜಿ, ನಾನು ಸತ್ತರೂ ಹಾಕಿಸಿಕೊಳ್ಳಲ್ಲ ಎಂದು ರಂಪಾಟ ಮಾಡಿದ್ರು. ಬಂದ ದಾರಿಗೆ ಸುಂಕವಿಲ್ಲ ಎಂದು ವ್ಯಾಕ್ಸಿನ್ ಹಾಕಲು ಬಂದ ಸಿಬ್ಬಂದಿ ವಾಪಸ್ ಹೋದರು.
ಅತ್ತ ರಾಯಚೂರು ನಗರದಲ್ಲಿ ಯುವತಿಯೊಬ್ಬಳೂ ಇದೇ ರಂಪಾಟ ಮಾಡಿದ್ದಾಳೆ. ಆರೋಗ್ಯ ಇಲಾಖೆ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತರ ಮನವೊಲಿಕೆಗೂ ಒಪ್ಪದ ಯುವತಿ, ಮನೆಯ ಒಳಗೇ ನಿಂತು 'ನೋ ನೋ ..' ಎನ್ನುತ್ತಲೇ ಸಿಬ್ಬಂದಿಯನ್ನ ಅಲ್ಲಿಂದ ವಾಪಸ್ ಕಳುಹಿಸಿದ್ದಾಳೆ.