

ಹಾಸನ: ಜನರು ರೋಡಲ್ಲಿ ಬಿದ್ದು ಸಾಯ್ತಿದ್ದಾರೆ, ಹೇಳೋರು ಕೇಳೋರು ಯಾರು ಇಲ್ಲವೇ? ಖಾಸಗಿ ಆಸ್ಪತ್ರೆ ಬೆಡ್ಗಳು ಎಂಎಲ್ಎ ಮನೆಯವರಿಗೆ ಮತ್ತು ಅವರ ಸಂಬಂಧಿಕರು, ಅಧಿಕಾರಿಗಳ ಮಕ್ಕಳಿಗೆ ಮೀಸಲಿವೆ. ಹೇಳೋರು ಕೇಳೋರು ಯಾರೂ ಇಲ್ವೆ? ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ರಾಜ್ಯ ಸರ್ಕಾರವನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಹಾಸನ ಹಿಮ್ಸ್ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಕೃಷ್ಣಮೂರ್ತಿ ಅವರನ್ನ ದಿಢೀರ್ ವರ್ಗಾವಣೆ ಮಾಡಿರುವ ಸರ್ಕಾರದ ವಿರುದ್ಧ ಗರಂ ಆದ ರೇವಣ್ಣ, ಹಾಸನ ಜಿಲ್ಲೆಯಲ್ಲಿ ರೆಮಿಡಿಸಿವಿಯರ್ ಇಂಜಕ್ಷನ್ ಇಲ್ಲ. ಇಂಥ ಸಮಯದಲ್ಲಿ ಹಿಮ್ಸ್ ಡಿಎಸ್ಒ ವರ್ಗಾವಣೆ ಮಾಡಿದ್ದು ಸರಿಯೇ? ಈಗ ಬಂದಿರೋನು ನಮ್ಮ ಸಂಬಂಧಿಕರ ಹುಡುಗ. ಆತ ಸರಿಯಾಗಿ ಕೆಲಸ ಮಾಡಲ್ಲ, ಆದರೂ ಆತನನ್ನ ಇಲ್ಲಿಗೆ ಹಾಕಿದ್ದಾರೆ. ಇಂದು ಹಿಮ್ಸ್ ಉಳಿದಿದೆ ಅಂದ್ರೆ ಡಾ. ಕೃಷ್ಣಮೂರ್ತಿ ಸೇವೆ ಕಾರಣ. ಉಸ್ತುವಾರಿ ಸಚಿವರಿಗೆ ವರ್ಗಾವಣೆ ಆಗಿರೋದು ಗೊತ್ತಿಲ್ಲವಂತೆ ಎಂದು ಕಿಡಿಕಾರಿದರು. ಈ ಸಂಬಂಧ ನಾಳೆ ಬೆಳಗ್ಗೆ ಸಿಎಂ ಮನೆ ಮುಂದೆ ಧರಣಿ ಕೂರುತ್ತೇನೆ ಎಂದು ಎಚ್ಚರಿಸಿದರು.
ನನಗೆ ಕರೊನಾ ಬಂದ್ರೂ ಪರವಾಗಿಲ್ಲ. ಸಿಎಂ ಮನೆ ಮುಂದೆ ಧರಣಿ ಮಾಡಿ ಅಲ್ಲಿಯೇ ಮಲಗುತ್ತೇನೆ. ಕೂಡಲೇ ಜಿಲ್ಲಾ ಸರ್ಜನ್ ವರ್ಗಾವಣೆ ರದ್ದು ಮಾಡಲಿ ಎಂದು ರೇವಣ್ಣ ಆಗ್ರಹಿಸಿದರು. ನಮ್ಮಪ್ಪ ಹೇಳಿದರೂ ನಾನು ಕೇಳಲ್ಲ, ಹೋರಾಡುತ್ತೇನೆ. ನಮ್ಮ ಜನವೇ ಇಲ್ಲ ಅಂದಮೇಲೆ ನನ್ನ ಪ್ರಾಣ ಇಟ್ಕೊಂಡು ಏನು ಮಾಡೋದು? ಮೇ ತಿಂಗಳ ಅಂತಿಮದೊಳಗೆ ಯಾರು ಉಳೀತಾರೆ, ಯಾರು ಇರಲ್ಲ ಅನ್ನೊದು ಗೊತ್ತಿಲ್ಲ. ಈ ಮಾತನ್ನ ತಜ್ಞರು ಹೇಳುತ್ತಿದ್ದಾರೆ ಎಂದರು.