

ಕೋಲಾರ: ಕರೊನಾ ನೀನೆಷ್ಟು ಕ್ರೂರಿ... ಎಂದು ಪದೇಪದೆ ಶಪಿಸುವಂತೆ ದುರ್ಘಟನೆಗಳು ಸಂಭವಿಸುತ್ತಲೇ ಇದೆ. ಲೆಕ್ಕವಿಲ್ಲದಷ್ಟು ಸಾವು-ನೋವಿನ ಪ್ರಮಾಣ ಹೆಚ್ಚುತ್ತಲೇ ಇದೆ. ಇಡೀ ಕುಟುಂಬವೇ ಕರೊನಾಗೆ ಬಲಿಯಾದ, ತಂದೆ-ಮಗ, ತಾಯಿ-ಮಗ, ತಾಯಿ-ಮಗು... ಹೀಗೆ ಒಟ್ಟಾಗಿ ಸಾಯುತ್ತಿರುವುದು ಮನಕಲಕುತ್ತಿವೆ.
ಇಂತಹದ್ದೇ ಮತ್ತೊಂದು ಸಾವು ಕೋಲಾರದಲ್ಲಿ ಸಂಭವಿಸಿದೆ. ಮುಳಬಾಗಿಲು ಪಟ್ಟಣದ ಜೆಮಿನಿ ಫೋಟೋ ಸ್ಟುಡಿಯೋ ಮಾಲೀಕ ರಮೇಶ್ (46) ಮತ್ತು ಇವರ ಪತ್ನಿ ಅನಸೂಯಾ(41) ಮಹಾಮಾರಿ ಕರೊನಾಗೆ ಬಲಿಯಾಗಿದ್ದು, ಸಾವಲ್ಲೂ ದಂಪತಿ ಒಂದಾಗಿದ್ದಾರೆ.
ಮೂರು ದಿನದ ಹಿಂದೆ ದಂಪತಿಗೆ ಕರೊನಾ ಪಾಸಿಟಿವ್ ಬಂದಿತ್ತು. ಕೋಲಾರದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು(ಬುಧವಾರ) ಇಬ್ಬರೂ ಮೃತಪಟ್ಟಿದ್ದಾರೆ. ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.