

ಬಳ್ಳಾರಿ: ಕರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಲಾಕ್‌ಡೌನ್ ಜಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ಬಿಟ್ಟು ಸ್ವಗ್ರಾಮಕ್ಕೆ ಹೊರಟಿದ್ದ ತಂದೆ-ಮಗ ಸೇರಿ ನಾಲ್ವರು ಮಾರ್ಗಮಧ್ಯೆ ಭೀಕರ ಅಪಘಾತಕ್ಕೀಡಾಗಿ ಮೃತಪಟ್ಟ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.
ವಾಣಿಜ್ಯ ತೆರಿಗೆ ಇಲಾಖೆಯ ನಿರೀಕ್ಷಕ ಬಸವರಾಜ ಭೀಮರಾವ ಬೆಳ್ಳೂರು(52), ಎಂಬಿಬಿಎಸ್ ವಿದ್ಯಾರ್ಥಿ ಭೀಮರಾವ ಬೆಳ್ಳೂರು(30), ಖಾಸಗಿ ಕಂಪನಿ ಉದ್ಯೋಗಿ, ಬಿಇ ಪದವೀಧರ ಸುನೀಲ ಶಿವರಾಜ ಪಾಟೀಲ(30) ಮತ್ತು ಕಾರು ಚಾಲಕ ರೇವಣಸಿದ್ದಪ್ಪ ಬಸವರಾಜ ಕೊರಡಂಪಳ್ಳಿ(30) ಮೃತ ದುರ್ದೈವಿಗಳು. ಮೃತರೆಲ್ಲರೂ ಚಿಂಚೋಳಿ ತಾಲೂಕಿನ ಚಿಮ್ಮಾದಲಾಯಿ ಮತ್ತು ಕೊರಡಂಪಳ್ಳಿ ಗ್ರಾಮದ ಮೂಲದವರು. ಇವರು ಬೆಂಗಳೂರಿನಲ್ಲಿ ವಾಸವಿದ್ದರು. ಇದನ್ನೂ ಓದಿರಿ ಲಾರಿಗೆ ಕಾರು ಡಿಕ್ಕಿ, ಸ್ಥಳದಲ್ಲೇ ಯುವಕರಿಬ್ಬರ ದುರ್ಮರಣ
ಲಾಕ್‌ಡೌನ್ ಹಿನ್ನೆಲೆ ಸ್ವಗ್ರಾಮಕ್ಕೆ ಮಂಗಳವಾರ ರಾತ್ರಿ ಬೆಂಗಳೂರಿನಿಂದ ಕಾರಿನಲ್ಲಿ ಬರುತ್ತಿದ್ದರು. ಮಾರ್ಗಮಧ್ಯೆ ಸಿರಗುಪ್ಪ ಬಳಿ ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ತೆಕ್ಕಲಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.