ರಾಜ್ಯದಲ್ಲಿ ಕರೊನಾ ಒಮಿಕ್ರಾನ್​ ಉಪತಳಿ ಪತ್ತೆ

omicron
Published on

ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್​ನ ಹೊಸ ಉಪತಳಿಗಳಾದ ಬಿಎ3, ಬಿಎ4 ಮತ್ತು ಬಿಎ5 ಪತ್ತೆಯಾಗಿದ್ದು, ಇದರೊಂದಿಗೆ ನಾಲ್ಕನೇ ಅಲೆಗೆ ಕಾರಣವಾಗಬಹುದು ಎಂದು ಅಂದಾಜಿಸಲಾಗಿರುವ ಬಿಎ 5 ವೈರಸ್​ ರಾಜ್ಯದಲ್ಲೂ ಕಂಡು ಬಂದಿದೆ. ಮೇ ಮತ್ತು ಜೂನ್​ನಲ್ಲಿ ನಡೆದ ವಂಶವಾಹಿ ಪರೀಕ್ಷೆಯಲ್ಲಿ ಶೇ.98 ಒಮಿಕ್ರಾನ್​ ಬಿಎ1.1.529, ಬಿಎ1, ಬಿಎ2 ಪತ್ತೆಯಾಗಿದ್ದು, ಶೇ.2 ಒಮಿಕ್ರಾನ್​ನ ಹೊಸ ಉಪತಳಿಗಳು ಪತ್ತೆಯಾಗಿರುವ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ಟ್ವೀಟ್​ ಮಾಡಿದ್ದಾರೆ.

ರಾಜ್ಯದಲ್ಲಿ ಮೂರನೇ ಅಲೆ ಸಂದರ್ಭದಲ್ಲಿ ಒಮಿಕ್ರಾನ್​ ಉಪತಳಿಗಳಾದ ಬಿಎ1.1.529, ಬಿಎ1, ಬಿಎ2 ಮಾತ್ರ ಪತ್ತೆಯಾಗಿದ್ದವು. ಮೂರನೇ ಅಲೆ ತಗ್ಗಿದ ನಂತರ ಏಪ್ರಿಲ್​ನಲ್ಲಿ ಕೋವಿಡ್​ ಸೋಂಕು ಪ್ರಕರಣಗಳು ಸರಾಸರಿ 100 ವರದಿಯಾಗುತ್ತಿದ್ದವು. ಆದರೆ, ಮೇ ಕೊನೆಯ ವಾರಕ್ಕೆ ಪ್ರಕರಣಗಳ ಸಂಖ್ಯೆ 200ಕ್ಕೆ ಏರಿಕೆಯಾಗಿದ್ದವು. ಜೂನ್​ ಆರಂಭದೊಂದಿಗೆ ಸೋಂಕು ಪ್ರಕರಣಗಳ ಸಂಖ್ಯೆ ನಿರಂತರ ಏರಿಕೆಯಾಗುತ್ತಿದ್ದು ದಿನದ ಸರಾಸರಿ ಪ್ರಕರಣಗಳ ಸಂಖ್ಯೆ 800 ಗಡಿ ದಾಟಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 5 ಸಾವಿರ ಗಡಿ ದಾಟಿದೆ.

ಈ ಹಿನ್ನೆಲೆ ಆರೋಗ್ಯ ಇಲಾಖೆ ವಂಶವಾಹಿ ಪರೀಕ್ಷೆ ತೀವ್ರಗೊಳಿಸಿತ್ತು. ಜತೆಗೆ ಮಕ್ಕಳ ಸಿರೋ ಸಮೀಕ್ಷೆ ಸಹ ನಡೆಸಿದೆ. ಮೇ ಮತ್ತು ಜೂನ್​ನಲ್ಲಿ ನಡೆಸಿದ ವಂಶವಾಹಿ ಪರೀಕ್ಷೆಗಳಲ್ಲಿ ಹೊಸ ಉಪತಳಿಗಳು ಒಂದಿಷ್ಟು ಪ್ರಮಾಣದಲ್ಲಿರುವುದು ದೃಢಪಟ್ಟಿದ್ದು, ಇವುಗಳಿಂದಲೇ ಕಳೆದ ಒಂದು ತಿಂಗಳಿಂದ ಹೊಸ ಪ್ರಕರಣ ಹೆಚ್ಚಳವಾಗಿರಬಹುದು ಎಂದು ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳ ವಿಭಾಗದ ವೈದ್ಯಾಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net