ಒಮಿಕ್ರಾನ್​ ಟಫ್​ ರೂಲ್ಸ್​: ಏಕ್‌ ಲವ್‌ ಯಾ ಸೇರಿದಂತೆ ಹಲವು ಸಿನಿಮಾ ಬಿಡುಗಡೆ ಮುಂದೂಡಿಕೆ

Ek Love Ya - Final
Published on

ಬೆಂಗಳೂರು: ಕರೊನಾ ಮತ್ತು ಒಮಿಕ್ರಾನ್​ ಲಾಕ್​ಡೌನ್​ ಕರಿನೆರಳು ಚಿತ್ರರಂಗವನ್ನು ಬೆಂಬಿಡದೆ ಕಾಡುತ್ತಿದೆ. ಪರಿಣಾಮ ರಿಲೀಸ್​ಗೆ ಸಿದ್ಧವಾಗಿದ್ದ ಒಂದೊಂದೇ ಸಿನಿಮಾಗಳನ್ನು ಚಿತ್ರತಂಡ ಮುಂದೂಡುತ್ತಿದೆ. ಜ.21ರಂದು ತೆರೆಗೆ ಬರಬೇಕಿದ್ದ 'ಏಕ್ ಲವ್ ಯಾ', ಫೆ. 4ರಂದು ಬಿಡುಗಡೆಯಾಗಲಿದ್ದ 'ಗಜಾನನ ಗ್ಯಾಂಗ್' ಸೇರಿದಂತೆ ಹಲವು ಸಿನಿಮಾಗಳನ್ನು ಮುಂದೂಡಲಾಗಿದೆ.

ರಕ್ಷಿತಾಸ್‌ ಫಿಲ್ಮ್‌ ಫ್ಯಾಕ್ಟರಿ ಲಾಂಛನದಲ್ಲಿ, ಶೋಮ್ಯಾನ್‌ ಪ್ರೇಮ್ ನಿರ್ದೇಶಿಸಿರುವ ಸಿನಿಮಾ ʻಏಕ್‌ ಲವ್‌ ಯಾʼ. ಈ ಚಿತ್ರದೊಂದಿಗೆ ನಟಿ ರಕ್ಷಿತಾ ಅವರ ಸಹೋದರ ರಾಣಾ ನಾಯಕನಟನಾಗಿ ಚಿತ್ರರಂಗಕ್ಕೆ ಪರಿಚಯಗೊಳ್ಳುತ್ತಿದ್ದಾರೆ. ರಚಿತಾ ರಾಮ್‌, ರೀಷ್ಮಾ ನಾಣಯ್ಯ ನಾಯಕಿಯರಾಗಿ ನಟಿಸಿದ್ದಾರೆ. ಅರ್ಜುನ್‌ ಜನ್ಯಾ ಸಂಗೀತ ನಿರ್ದೇಶನ, ಮಹೇನ್‌ ಸಿಂಹ ಛಾಯಾಗ್ರಹಣದ ʻಏಕ್‌ ಲವ್‌ ಯಾʼ ಇದೇ ಜನವರಿ ತಿಂಗಳ 21ರಂದು ತೆರೆಗೆ ಬರಬೇಕಿತ್ತು. ಸದ್ಯ ಕೋವಿಡ್‌ ಪ್ರಕರಣಗಳು ಹೆಚ್ಚಾಗಿ, ವಾರಾಂತ್ಯದ ಲಾಕ್‌ ಡೌನ್‌ ಇತ್ಯಾದಿ ಸಮಸ್ಯೆಗಳಿಂದ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.

ಡಿ.31ಕ್ಕೆ ಬಿಡುಗಡೆಯಾಗಬೇಕಿದ್ದ 'ಜೆರ್ಸಿ' ಮುಂದಕ್ಕೆ ಹೋಯಿತು. ಜ.6ಕ್ಕೆ ತೆರೆಕಾಣಬೇಕಿದ್ದ 'ಆರ್​ಆರ್​ಆರ್​' ಅರ್ನಿಧಿಷ್ಟಾವಧಿಗೆ ಮುಂದೂಡಲ್ಪಟ್ಟಿತು. ಜನವರಿ 21ಕ್ಕೆ ಬಿಡುಗಡೆಯಾಗಬೇಕಿದ್ದ 'ಪೃಥ್ವಿರಾಜ್​' ಸಹ ಇದೀಗ ಮುಂದಕ್ಕೆ ಹೋಗಿರುವ ಸುದ್ದಿ ಬಂದಿದೆ. 'ಅವತಾರ್​ ಪುರುಷ' ಮುಂದೂಡಲಾಗಿದ್ದು, ಹೊಸ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಹಾಗಾಗಿ, ಕನ್ನಡದಲ್ಲಿ ಯಾವುದಾದರೂ ದೊಡ್ಡ ಚಿತ್ರ ಇದೆ ಎಂದರೆ ಅದು ಫೆ. 24ಕ್ಕೆ ಬಿಡುಗಡೆಯಾಗಬೇಕಿರುವ 'ವಿಕ್ರಾಂತ್​ ರೋಣ' ಮಾತ್ರ. ಅದಕ್ಕಿನ್ನೂ ಒಂದೂವರೆ ತಿಂಗಳು ಸಮಯವಿದ್ದು, ಮುಂದೂಡುವ ಯಾವುದೇ ಯೋಚನೆ ಇಲ್ಲ ಎಂದು ಚಿತ್ರತಂಡ ಹೇಳಿದೆ. ಸಂಪೂರ್ಣ ಲಾಕ್​ಡೌನ್​ ಅಲ್ಲದಿದ್ದರೂ, ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಹಾಜರಾತಿಯಿಂದ ದೊಡ್ಡ-ಸಣ್ಣ ಚಿತ್ರವೆನ್ನದೆ ಎಲ್ಲ ಚಿತ್ರಗಳಿಗೂ ಸಮಸ್ಯೆ ಸಹಜ. ಹಾಗಾಗಿ, ಸದ್ಯದ ಮಟ್ಟಿಗೆ ಚಿತ್ರ ಬಿಡುಗಡೆ ಮಾಡಬೇಕೋ, ಬೇಡವೋ ಎಂಬ ಗೊಂದಲ ಕನ್ನಡ ಚಿತ್ರರಂಗದಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net