ಕರೊನಾ 3ನೇ ಅಲೆಯಲ್ಲಿ ಮಕ್ಕಳ ರಕ್ಷಣೆ ಹೇಗೆ? ಸದ್ಯದಲ್ಲೇ ಸಿಎಂ ಕೈ ಸೇರಲಿದೆ ಡಾ.ದೇವಿಶೆಟ್ಟಿ ವರದಿ

dr devishetty
Published on

ಬೆಂಗಳೂರು: ಮಹಾಮಾರಿ ಕರೊನಾ ಮೂರನೇ ಅಲೆಗೆ ಮಕ್ಕಳೇ ಟಾರ್ಗೆಟ್​ ಎಂಬ ಆತಂಕಕಾರಿ ಅಂಶ ಬಯಲಾಗಿದ್ದು, ಈ ಸಂದಿಗ್ಧ ಪರಿಸ್ಥಿತಿಯನ್ನ ಎದುರಿಸುವುದ್ಹೇಗೆ? ಮಕ್ಕಳ ರಕ್ಷಣೆಗೆ ಏನೆಲ್ಲಾ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು, ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಮಹತ್ತರ ಸಲಹೆಯನ್ನೊಳಗೊಂಡ ವರದಿಯನ್ನ ಡಾ.ದೇವಿಶೆಟ್ಟಿ ನೇತೃತ್ವದ ತಂಡ ಸಿದ್ಧಪಡಿಸಿದ್ದು, ಸದ್ಯದಲ್ಲೇ ಸಿಎಂ ಯಡಿಯೂರಪ್ಪ ಅವರ ಕೈ ಸೇರಲಿದೆ.

ರಾಜ್ಯದಲ್ಲಿ 18 ವರ್ಷದೊಳಗಿನ ಒಟ್ಟು 2.38 ಕೋಟಿ ಮಕ್ಕಳಿದ್ದಾರೆ. ಅವರಿಗೆ 23,804 ಬೆಡ್​ಗಳು ಬೇಕಾಗಬಹುದು. ಮಕ್ಕಳಿಗೆ ಅಗತ್ಯ ಚಿಕಿತ್ಸೆ ನೀಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಕೋವಿಡ್​ ಕೇರ್​ ಸೆಂಟರ್​ಗಳಲ್ಲಿ ಮಕ್ಕಳಿಗಾಗಿ ವೆಂಟಿಲೇಟರ್​ ಸೌಲಭ್ಯ ಮಾಡಿಕೊಳ್ಳಬೇಕು. ಆದಷ್ಟು ಬೇಗ ಮಕ್ಕಳಿಗೆ ಲಸಿಕೆ ಕೊಡಲು ಅನುಮೋದನೆ ಕೊಡುವುದು ಸೇರಿದಂತೆ ಹಲವು ಸಲಹೆಗಳು ದೇವಿಶೆಟ್ಟಿ ವರದಿಯಲ್ಲಿ ಇದೆ ಎನ್ನಲಾಗಿದೆ. ಈ ಬಗ್ಗೆ ಶೀಘ್ರವೇ ಸಂಪೂರ್ಣ ಮಾಹಿತಿ ಸಿಗಲಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಸಿಎಂ, ಕೋವಿಡ್ 3ನೇ ಅಲೆ ಬಗ್ಗೆ ದೇವಿಶೆಟ್ಟಿ ನೇತೃತ್ವದ ಸಮಿತಿಯೊಂದಿಗೆ ಸಭೆ ಇದೆ. ಅವರು ವರದಿ ನೀಡಲಿದ್ದು, ಚರ್ಚೆ ನಡೆಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡುವೆ ಎಂದರು.

ಸಿಎಸ್​ಆರ್ ಅಡಿಯಲ್ಲಿ ಸಂಚಾರಿ ಲಸಿಕಾ ವಾಹನ, ಆಂಬುಲೆನ್ಸ್, ಸ್ಯಾಂಪಲ್ ಕಲೆಕ್ಷನ್ ವಾಹನಗಳನ್ನು ಬಿಬಿಎಂಪಿಗೆ ಹಸ್ತಾಂತರಿಸಲಾಗಿದೆ. ಕೋವಿಡ್ ಸಾಂಕ್ರಾಮಿಕ ತಡೆಗಟ್ಟುವ ನಿಟ್ಟಿನಲ್ಲಿ ಇದು ಉಪಯುಕ್ತ ಆಗಲಿದೆ. ವಾಹನ ನೀಡಿದವರಿಗೆ ಧನ್ಯವಾದ ಎಂದು ಸಿಎಂ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net