

ಕೊಲ್ಲಂ(ಕೇರಳ): ಒಂದು ವರ್ಷದ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವ ವೈದ್ಯೆ ಗಂಡನ ಮನೆಯಲ್ಲೇ ದುರಂತ ಅಂತ್ಯ ಕಂಡಿದ್ದಾಳೆ. ಸಾವಿಗೂ ಮುನ್ನ ತಾನು ಅನುಭವಿಸಿದ್ದ ಕಷ್ಟವನ್ನ ವಾಟ್ಸ್ಆ್ಯಪ್ ಮತ್ತು ಫೇಸ್ಬುಕ್ನಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ವೈರಲ್ ಆಗಿದೆ.
24 ವರ್ಷದ ಎಸ್.ವಿ ವಿಸ್ಮಯ ಮೃತ ದುರ್ದೈವಿ. 2020ರ ಮೇ ತಿಂಗಳಲ್ಲಿ ಮೋಟಾರು ವಾಹನ ವಿಭಾಗದ ಅಧಿಕಾರಿ ಎಸ್.ಕಿರಣ್ಕುಮಾರ್ ಜತೆ ವಿಸ್ಮಯಳ ಮದುವೆಯನ್ನ ಕುಟುಂಬಸ್ಥರು ಅದ್ದೂರಿಯಾಗಿ ಮಾಡಿಕೊಟ್ಟಿದ್ದರು. ದಂಪತಿ ಇಬ್ಬರೂ ಕೇರಳದ ಕೊಲ್ಲಂನಲ್ಲಿ ವಾಸವಿದ್ದರು.
ಸೋಮವಾರ ಬೆಳಗ್ಗೆ ಗಂಡನ ಮನೆಯಲ್ಲಿ ವಿಸ್ಮಯ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ದೇಹದ ಮೇಲೆ ಗಾಯದ ಗುರುತುಗಳಿವೆ. ಗಂಡನ ಹಣದಾಹಕ್ಕೆ ವಿಸ್ಮಯ ಬಲಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಸಾವಿಗೂ ಮುನ್ನ ವಿಸ್ಮಯ ಹಲವು ಬಾತಿ ತನ್ನ ಸೋದರ ಸಂಬಂಧಿ ಬಳಿ ಗಂಡ ಕೊಡುತ್ತಿರುವ ಚಿತ್ರಹಿಂಸೆ ಸಹಿಸಲಾಗ್ತಿಲ್ಲ, ವರದಕ್ಷಿಣೆ ಬೇಕು ಎಂದು ನಿತ್ಯ ಹಿಂಸಿಸುತ್ತಾರೆ ಎಂದು ಹೇಳಿಕೊಂಡಿದ್ದರಂತೆ. ಸಾವಿಗೂ ಮುನ್ನ ಅಂದರೆ ಭಾನುವಾರ ರಾತ್ರಿ ವಾಟ್ಸ್ಆ್ಯಪ್ ಮತ್ತು ಫೇಸ್ಬುಕ್ನಲ್ಲಿಯೂ ಸೋದರ ಸಂಬಂಧಿ ಜತೆ ಚಾಟ್ ಮಾಡಿರುವ ವಿಸ್ಮಯ ಬಹುಶಃ ಇದೇ ನನ್ನ ಕೊನೇ ಮೆಸೇಜ್ ಆಗಬಹುದು. ಗಂಡನ ಕಿರುಕುಳ ಸಹಿಸಲಾಗ್ತಿಲ್ಲ ಎಂದು ಹೇಳಿದ್ದಾರೆ.
ಮರುದಿನ ಬೆಳಗ್ಗೆ ವಿಸ್ಮಯ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಸಾವಿಗೆ ಆಕೆಯ ಗಂಡನೇ ಕಾರಣ. ಮದುವೆ ಸಂದರ್ಭದಲ್ಲಿ ಒಂದು ಎಕರೆ ಜಮೀನು, ಒಂದು ಕಾರನ್ನು ಕೊಡಿಸಲಾಗಿತ್ತು. ಆದರೂ ಅಳಿಯನ ಹಣದಾಹ ಕಡಿಮೆ ಆಗಿರಲಿಲ್ಲ ಎಂದು ಮೃತಳ ಕುಟುಂಬಸ್ಥರು ದೂರು ನೀಡಿದ್ದು, ಆರೋಪಿ ಕಿರಣ್ ಕುಮಾರ್ನನ್ನು ಬಂಧಿಸಲಾಗಿದೆ. ವಿಸ್ಮಯಳ ಮೇಲೆ ಕಿರಣ್ ಹಲ್ಲೆ ಮಾಡಿ ಗಾಯಗೊಳಿಸಿರುವ ಫೋಟೋ ಕೂಡ ವೈರಲ್ ಆಗಿದೆ.