ರಾಯಚೂರಲ್ಲಿ ಕಲುಷಿತ ನೀರು ಪೂರೈಕೆ: 4ಕ್ಕೆ ಏರಿದ ಮೃತರ ಸಂಖ್ಯೆ

Contaminated water supply Raichur
Published on

ರಾಯಚೂರು: ನಗರದಲ್ಲಿ ಕಲುಷಿತ ನೀರು ಪೂರೈಕೆಯಿಂದ ವಾಂತಿಭೇದಿ ಉಲ್ಬಣಿಸಿ ಹಲವರು ಅಸ್ವಸ್ಥಗೊಂಡ ಪ್ರಕರಣದಲ್ಲಿ ಇಂದು(ಜೂ.8) ಮತ್ತೊಬ್ಬ ಮೃತಪಟ್ಟಿದ್ದು, ಸಾವಿನ ಸಂಖ್ಯೆ 4ಕ್ಕೆ ಏರಿದೆ.

ರಾಂಪುರ ಜಲಾಶಯದಿಂದ ನಗರದ 14 ವಾರ್ಡ್​ಗಳಿಗೆ ನೀರನ್ನು ಶುದ್ಧೀಕರಿಸದೆ ಪೂರೈಕೆ ಮಾಡುತ್ತಿರುವುದರಿಂದ ಈ ನೀರನ್ನು ಕುಡಿದವರ ಆರೋಗ್ಯ ಹದಗೆಟ್ಟಿದೆ. ಮೇ 31ರಂದು ಕಲುಷಿತ ನೀರು ಕುಡಿದು ಮಕ್ಕಳು ಸೇರಿ ನೂರಾರು ಮಂದಿ ಅಸ್ವಸ್ಥಗೊಂಡಿದ್ದರು. ಅಂದು ಇಂದಿರಾ ನಗರದ ಮಲ್ಲಮ್ಮ(40) ವಾಂತಿಯಿಂದ ಮೃತಪಟ್ಟಿದ್ದಳು. ಸಾವಿನ ಸರಣಿ ಮುಂದುವರಿದಿದ್ದು, ಇದುವರೆಗೆ ನಾಲ್ವರು ದುರಂತ ಅಂತ್ಯ ಕಂಡಿದ್ದಾರೆ.

ಮಲ್ಲಮ್ಮ ಮೃತಪಟ್ಟ ಮೂರು ದಿನಕ್ಕೆ 7 ವಾರ್ಡ್​ನ ಅಬ್ದುಲ್ ಗಫೂರ್(37) ಕೊನೆಯುಸಿರೆಳೆದಿದ್ದರು. ನಂತರ ಅರಬ್ ಮೊಹಲ್ಲಾದ ಮಹ್ಮದ ನೂರ್(43) ಎಂಬುವವರು ಮೃತಪಟ್ಟರು. ನಗರಸಭೆ ಎಚ್ಚೆತ್ತ ನಗರಸಭೆ ನೀರು ಶುದ್ಧೀಕರಣ ಘಟಕದ ಸ್ವಚ್ಛತೆಗೆ ಮುಂದಾಯಿತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಪೌರಾಡಳಿತ ನಿರ್ದೇಶಕರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದರು. ಮೃತರ ಮೂರು ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಇದರ ನಡುವೆ ನಗರಸಭೆಯು ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡಲು ತೀರ್ಮಾನಿಸಿದೆ. ಆದರೆ, ಸಾವಿನ ಸರಣಿ ಮಾತ್ರ ನಿಂತಿಲ್ಲ. ಇದೇ ಪ್ರಕರಣದಲ್ಲಿ ಅಸ್ವಸ್ಥಗೊಂಡ ಮತ್ತೊಬ್ಬ ವ್ಯಕ್ತಿಯೂ ಇಂದು ಮೃತಪಟ್ಟಿದ್ದಾರೆ. ಅಂದ್ರೂನ್ ಕಿಲ್ಲಾ ಅಬ್ದುಲ್ ಕರೀಂ (50) ಮೃತಪಟ್ಟಿದ್ದು, ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net